ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಅವ್ಯವಸ್ಥೆಯ ಆಗರವಾಗಿದ್ದು, ಸರಿಯಾಗಿ ನಡೆಸದೆ ಅಧಿಕಾರಿಗಳು ಮತ್ತು ಶಾಸಕರು ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಅಭ್ಯರ್ಥಿ ಆಕಾಂಕ್ಷಿ ಎಸ್.ಕೆ. ಮರಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಕಳಪೆಯಿಂದ ಕೂಡಿವೆ. ಅಧಿಕಾರಿಗಳು
ಬೇಜವಾಬ್ದಾರಿಯಿಂದ ವರ್ತಿ ಸಿದ್ದಾರೆ. ರಸ್ತೆಗಳೆಲ್ಲ ಹಾಳಾಗಿವೆ. ರಸ್ತೆಯ ಮೇಲೆಯೇ ಮ್ಯಾನ್‌ಹೋಲ್‌ಗಳಿದ್ದು, ಸರಿಯಾಗಿ ನಿರ್ವಹಣೆ ಮಾಡಿಲ್ಲ. ಫುಟ್‌ಪಾತ್‌ಗಳಂತೂ ಹಾಳಾಗಿ ಹೋಗಿವೆ. ಅಳವಡಿಸಿದ ಕಲ್ಲುಗಳು ಎದ್ದಿವೆ. ಬಾಕ್ಸ್ ಚರಂಡಿಗಳ ಸ್ಥಿತಿಯೂ ಅದೇ ಆಗಿದೆ. ವಾಹನಗಳು, ಪಾದಚಾ ರಿಗಳು ಓಡಾಡುವುದೇ ಕಷ್ಟವಾಗಿದೆ ಎಂದರು.
ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲಾದ ವಿದ್ಯುತ್ ಸಂಪರ್ಕದ ಬಾಕ್ಸ್‌ಗಳಂತೂ ಬಾಯಿ ತೆರೆದುಕೊಂಡಿವೆ. ಕರುಳು ಪಚ್ಚಿಯಂತೆ ವೈರುಗಳು ಹೊರಕ್ಕೆ ಬಂದಿವೆ. ಅಪಘಾತದ ಭಯ ಹೆಚ್ಚಿದೆ. ಪಾತ್‌ವೇಗಳು ಹಾಳಾ ಗಿವೆ. ಗುತ್ತಿಗೆದಾರು ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ. ಸಾರ್ವಜನಿಕರ ಹಣ ಪೋಲಾಗಿದೆ. ಮೆಸ್ಕಾಂನ ಭೂಗತ ಕೇಬಲ್ ಅಳವಡಿಕೆ ಕೂಡ ಸರಿಯಾಗಿ ನಡೆದಿಲ್ಲ ಎಂದು ದೂರಿದರು.
ನಿರಂತರ ಕುಡಿಯುವ ನೀರಿನ ಯೋಜನೆ ಕೂಡ ಸಮರ್ಪಕವಾಗಿಲ್ಲ ೨೪/೭ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ಮನೆಗೆ ಸಂಪರ್ಕಗೊಳಿ ಸಿರುವ ಪೈಪ್ ಲೈನುಗಳು ಸರಿಯಾಗಿಲ್ಲ. ಮೀಟರುಗಳು ಕೂಡ ದೋಷಪೂರಿತವಾಗಿವೆ. ಇದರಿಂದ ನೀರಿನ ಬಿಲ್ ಕೂಡ ಹೆಚ್ಚಾಗಿದೆ. ನೀರಿಲ್ಲದೆ ಗಾಳಿ ಬಂದರೂ ಕೂಡ ಮೀಟರ್ ಓಡುತ್ತದೆ. ಒಟ್ಟಾರೆ ಇದೊಂದು ದುರವಸ್ಥೆಯ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ಇಷ್ಟಾದರೂ ಶಾಸಕ ಕೆ.ಎಸ್. ಈಶ್ವರಪ್ಪ, ಸ್ಮಾಟ್ ಸಿಟಿ ಕಾಮಗಾರಿಗಳು ಚೆನ್ನಾಗಿ ನಡೆದಿವೆ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಕಾಮಗಾರಿಗಳನ್ನು ನೋಡದೆ ಅಧಿಕಾರಿಗಳ ಪರ ವಹಿಸಿ ಮಾತನಾಡು ವುದನ್ನು ನೋಡಿದರೆ ಇದರಲ್ಲಿ ಇವರ ರಾಜಕೀಯ ಹಿತಾಸಕ್ತಿ ಕಂಡುಬರುತ್ತದೆ. ತಕ್ಷಣವೇ ಕಳಪೆ ಕಾಮಗಾರಿಗಳ ತನಿಖೆ ನಡೆಸಬೇಕು. ಇದಕ್ಕಾಗಿ ನಾಗರಿಕರೂ ಸೇರಿದಂತೆ ಸರ್ವ ಪಕ್ಷಗಳ ಸಮಿತಿ ರಚಿಸಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾಶಂಕರ ಉಪಾಧ್ಯ, ಸುನಿಲ್, ತಾರಾನಾಥ್, ಉಮೇಶ್, ಪ್ರಭಾಕರ ಗೌಡ, ಬಾಲಾಜಿ, ರಘುವೀರ ಸಿಂಘ್, ರಘು, ಮಲ್ಲಿಕಾರ್ಜುನ, ಚಿನ್ನಪ್ಪ ಮತ್ತಿತಿರರಿದ್ದರು.