Site icon TUNGATARANGA

ಮರೆಯದ ಮಾಣಿಕ್ಯ, ಗಾನ ಕೋಗಿಲೆ ವಾಣಿ ಜಯರಾಂ ನೆನಹುಗಳ ಸುತ್ತ.., ಡಾ. ಎನ್. ಆರ್. ಮಂಜುಳರವರ ಬರಹ ಓದಿ

ಭಾರತದ ಮನೆ ಮಾತಾಗಿರುವ ಸಂಗೀತ ಕ್ಷೇತ್ರದಲ್ಲಿ ಧೃವತಾರೆ ಎಂದು ಹೆಸರು ಗಳಿಸಿದ ವಾಣಿ ಜಯರಾಂ ಅವರ ನಿಧನ ವಾರ್ತೆಯಿಂದ ಸಮಾಜಕ್ಕೆ ತುಂಬಲಾರದಷ್ಟು ನಷ್ಟವುಂಟಾಗಿದೆ. ಇವರು 14 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿ 8000 ಹಾಡುಗಳನ್ನು ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ನಾನು ಬಾಲ್ಯದಿಂದಲೂ ಆಕಾಶವಾಣಿಯಲ್ಲಿ ರೇಡಿಯೋ ಪ್ರಸಾರದಲ್ಲಿ ಇವರ ಬಹಳಷ್ಟು ಹಾಡು ಕೇಳುತಿದ್ದೆನು ಇದನ್ನು ನಾವು ನೀವು ಮರೆಯಲು ಸಾಧ್ಯವೇ ಇಲ್ಲ.

ವಾಣಿ ಜಯರಾಂ ಅವರು ಹುಟ್ಟಿದ್ದು ತಮಿಳುನಾಡಿನ ವೆಲ್ಲೂರಿನ ಇಡಂಗು ಗ್ರಾಮದಲ್ಲಿ ನವೆಂಬರ್ 30, 1945 ರಲ್ಲಿ ಜನಿಸಿದ್ದರು. ವಾಣಿಯವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸ ರಂಗ ರಾಮಾನುಜ ಅಯ್ಯಂಗಾರ್ ಶಿಷ್ಯೆ ಆಗಿದ್ದರು.ಹೀಗಾಗಿ ಇವರಿಗೆ ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿಗೆ ಕಡಲೂರು ಶ್ರೀನಿವಾಸ ಅಯ್ಯಂಗಾರ್ ರ ಬಳಿ ಸಂಗೀತಭ್ಯಾಸ ಪ್ರಾರಂಭಿಸಿದ್ದರು. 7 ನೇ ವಯಸ್ಸಿಗೆ ದೇಶಿಕಾಚಾರ್ ಅವರ ಕೃತಿಗಳನ್ನು ಸ್ಪುಟವಾಗಿ ಸರಾಗವಾಗಿ ಹಾಡುತ್ತಿದ್ದರು ಆಕಾಶವಾಣಿಯಲ್ಲಿ ಇವರ ಧ್ವನಿ ಪ್ರಸಾರವಾಗುತ್ತಿತ್ತು. ಹತ್ತು ವರ್ಷದವರಿದ್ದಾಗಲೇ ತಿರುಮಂತಪುರದಲ್ಲಿ 3 ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿದರು. ನಂತರ ಮದ್ರಾಸಿನ ವಿ.ವಿ. ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದ್ದರು.ಇಂಡೋ ಬೆಲ್ಜಿಯಂ ಛೇಂಬರ್ ಆಫ್ ಕಾಮರ್ಸ್ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ ವಿವಾಹವಾದ ನಂತರ ಇವರ ಜೀವನದಲ್ಲಿ ಮಹತ್ತರ ತಿರುವು ತಂದಿತು ಹೇಳ ಬಹುದು.

ಸ್ವತ: ಸಿತಾರ್ ವಾದಕರಾಗಿದ್ದ ಜಯರಾಂ ಅವರು ಪತ್ನಿ ವಾಣಿಯವರ ಪ್ರತಿಭೆಗೆ ಪ್ರೋತ್ಸಾಹ ನೀಡಿದರು‌. ವಾಣಿ ಜಯರಾಂ ಅವರು ಹಿಂದೂಸ್ತಾನಿ ಸಂಗೀತ ಕಲಿತ ಇವರಿಗೆ ಮರಾಠಿ ಚಲನ ಚಿತ್ರ ನಿರ್ದೇಶಕ ವಸಂತ ದೇಸಾಯಿ ತಮ್ಮ ” ಅಮ್ಮ ತಾಯಿ ಗೋಡೆ ” ಯಲ್ಲಿ ಮೊಟ್ಟ ಮೊದಲು ಹಾಡುವ ಅವಕಾಶ ಕಲ್ಪಿಸಿಕೊಟ್ಟರು. ಈ ಚಿತ್ರದ ಗಾಯನವನ್ನು ಮೆಚ್ಚಿಕೊಂಡ ಹಿಂದಿ ಚಲನ ಚಿತ್ರ ನಿರ್ದೇಶಕ ಹೃಷಿಕೇಶ ಮುಖರ್ಜಿ ಅವರು ತಮ್ಮ ” ಗುಡ್ಡಿ ” ಚಿತ್ರದಲ್ಲಿ ಹಾಡಿಸಿದರು. ಈ ಚಿತ್ರದ ಬೋಲ್ ರೇಪಪ್ಪಿ ಹರಾ ಹಾಡು ದೇಶದಾದ್ಯಂತ ಹೆಸರು ಮಾಡಿದ್ದು ಅಲ್ಲದೆ ವಾಣಿ ಜಯರಾಂ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.ಕನ್ನಡ ಭಾಷೆಯಲ್ಲಿ ಅಷ್ಟೇ ಅಲ್ಲದೆ ತಮಿಳು,ತೆಲಗು,ತುಳು,ಹಿಂದಿ,ಮರಾಠಿ, ಮಲಯಾಳಂ,ಬಂಗಾಳಿ,ಒಡಿಯಾ ಸೇರಿದಂತೆ ಒಟ್ಟು 14 ಭಾಷೆಗಳಲ್ಲಿ ಹಾಡಿ ಪ್ರಾವಿಣ್ಯತೆ ಪಡೆದಿದ್ದು 8000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಹಿನ್ನೆಲೆ ಗಾಯಕಿ ಇವರು.
ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್,ಶಿವರಾಜ್ ಕುಮಾರ್,ಅನಂತನಾಗ್,ಸೇರಿದಂತೆ ಇನ್ನು ಅನೇಕ ಹೆಸರಾಂತ ಕಲಾವಿದರ ಚಲನ ಚಿತ್ರಕ್ಕೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.
ರಣರಂಗ. ಶಿವಮೆಚ್ಚಿದ ಕಣ್ಣಪ್ಪ,ಒಲವಿನ ಉಡುಗೊರೆ, ಉಪಾಸನೆ, ಮಲಯ ಮಾರುತ ಸೇರಿದಂತೆ ಅನೇಕ ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ. ಕೆಲವೊಂದು ಪ್ರಸಿದ್ದ ಹಾಡುಗಳೆಂದರೆ
ಭಾವವೆಂಬ ಹೂವು ಅರಳಿ, ಹ್ಯಾಪಿಯೆಸ್ಟ್ ಮೂಮೆಂಟ್, ಓ ತಂಗಾಳಿಯೇ ನೀರಾಗಿ ಬಾ, ಮಧುಮಾಸ ಚಂದ್ರಮ,ನೀಲ ಮೇಘ ಶ್ಯಾಮ, ಹಾಲು ಜೇನು ಸೇರಿದ, ಹೋದೆಯಾ ದೂರ ಓ ಜೊತೆಗಾರ, ದೇವರ ಆಟ ಬಲ್ಲವರಾರು, ನಗಿಸಲು ನೀನು ನಗುವೆನು ನಾನು, ಮೂಡಣದ ರವಿ, ಇನ್ನು ಅನೇಕ ಹಾಡುಗಳು ಜನ ಪ್ರಿಯತೆ ಗಳಿಸಿತು.
ಎಸ್ ಜಾನಕಿ, ಪಿ.ಸುಶೀಲ ಮತ್ತು ವಾಣಿ ಜಯರಾಂ ಅವರುಗಳು ಹಾಡಿದ ಚಲನ ಚಿತ್ರಗಳ ಹಾಡುಗಳು ಸಾಕಷ್ಟು ಹೆಸರು ಗಳಿಸಿತು.ಇವರ ಹಾಡುಗಾರಿಕೆಗೆ ಮೆಚ್ಚಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡಿಕಿಕೊಂಡು ಬಂದವು. ಮೂರು ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು.ಪದ್ಮ ಭೂಷಣ ಪ್ರಶಸ್ತಿಯೂ ದೊರೆತಿದ್ದು ಇವರಿಗೆ ಮತ್ತಷ್ಟು ಹೆಗ್ಗಳಿಕೆಯಾಗಿತ್ತು.
ಅಪಾರ ಕೀರ್ತಿ ಗಳಿಸಿ ಹಿನ್ನೆಲೆ ಗಾಯಕಿಯಾಗಿದ್ದ ಇವರಿಗೆ 78 ವರ್ಷ ಆಗಿದ್ದು ಧಿಡೀರ್ ಅಂತ ಸಾವು ಸಂಭವಿಸಿದ್ದು ಸಮಾಜದಲ್ಲಿ ಸಂಗೀತ ಕ್ಷೇತ್ರಕ್ಕೆ ತುಂಬಲಾರದಷ್ಟು ನಷ್ಷವನ್ನುಂಟು ಮಾಡಿದೆ. ಇವರ ಪತಿಯೂ ಸಹ ಕೆಲವು ವರ್ಷಗಳ ಹಿಂದೆ ಮೃತರಾಗಿದ್ದು ಇವರಿಗೆ ಸಂತಾನ ಭಾಗ್ಯ ಇಲ್ಲವಾದ್ದರಿಂದ ತಮ್ಮ ಪೂರ್ಣ ಸಮಯವನ್ನು ಸಂಗೀತ ಕ್ಷೇತ್ರಕ್ಕೆ ಮುಡಿಪಾಗಿಟ್ಟಿದ್ದರು. ಇಂತ ಬಹುಮುಖ ಪ್ರತಿಭೆ ದಿನಾಂಕ,:04-02-2023 ರಂದು ಚೆನೈನ ತಮ್ಮ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಹೇಳುತ್ತಾ ವಾಣಿ ಜಯರಾಂ ಅವರಿಗೆ ಪದ ಮಾಲೆಯ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಾ ವಿರಮಿಸುತ್ತೇನೆ.

ಡಾ.ಎನ್.ಆರ್.ಮಂಜುಳ
ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಹಾಗೂ ಲೇಖಕಿ
ಶಿವಮೊಗ್ಗ

Exit mobile version