ವಾಸಕ್ಕೆ ಯೋಗ್ಯವಲ್ಲದ ಆಶ್ರಯ ಮನೆಗಳನ್ನು ಚುನಾವಣೆ ಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುವುದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಪಿಶೆಟ್ಟಿ ಮತ್ತು ಗೋವಿಂದಾಪುರದಲ್ಲಿ ಆಶ್ರಯ ಮನೆಗಳು ನಿರ್ಮಾಣವಾಗಿವೆ. ಆದರೆ ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ವಾಸಿಸಲು ಕೂಡ ಯೋಗ್ಯವಾಗಿಲ್ಲ. ಶಾಸಕ ಈಶ್ವರಪ್ಪನವರ ಮಾತಿನಂತೆ ಮುಖ್ಯಮಂತ್ರಿಗಳು ಅದನ್ನು ಉದ್ಘಾಟನೆ ಮಾಡಲು ಹೊರಟಿದ್ದಾರೆ. ಅದರ ಜೊತೆಗೆ ಇತರೆ ಕಾಮಗಾರಿಗಳು ಕೂಡ ಉದ್ಘಾಟನೆಯಾಗುತ್ತವೆ. ಉದ್ಘಾಟನೆ ಎಂಬುದು ಒಂದು ವಿಶಿಷ್ಟ ಸಂಪ್ರದಾಯ. ನಾವು ಹೊಸ ಮನೆ ಕಟ್ಟಿದಾಗ ಎಲ್ಲಾ ಕೆಲಸಗಳು ಮುಗಿದ ನಂತರ ಉದ್ಘಾಟನೆ ಮಾಡುತ್ತೇವೆ. ಆದರೆ ಶಾಸಕರು ಎಲ್ಲಿ ತಮಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲವೋ ಎಂಬ ಆತಂಕದಿಂದ ಅವಸರದಲ್ಲಿ ಉದ್ಘಾಟಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಮುಖ್ಯವಾಗಿ ವಿದ್ಯುತ್ ಸಂಪರ್ಕವೇ ಅಲ್ಲಿಲ್ಲ. ಮೆಸ್ಕಾಂನ ಮೂಲದ ಪ್ರಕಾರ ಒಂಭತ್ತು ಕೋಟಿ ರೂ. ಠೇವಣಿ ಕಟ್ಟಬೇಕು ಈಗ ತಕ್ಷಣಕ್ಕೆ ೪ ಕೋಟಿ ರೂ. ಕಟ್ಟಬೇಕು. ಅದಿನ್ನೂ ಆಗಿಲ್ಲ. ಟೆಂಡರ್ ಕೂಡ ಕರೆದಿಲ್ಲ. ಆದರೆ ಅಧಿಕಾರಿಗಳ ಬಾಯಿ ಮುಚ್ಚಿಸಿ ಕೇವಲ ೨೦ಲಕ್ಷ ರೂ. ಕಟ್ಟಿದ್ದಾರೆ. ಅದು ೨೮ ದಿನಕ್ಕೆ ಮಾತ್ರ. ನಂತರ ಸಂಪರ್ಕ ಪಡೆಯಲು ೭ಲಕ್ಷರೂ.ನಂತೆ ಕಟ್ಟಬೇಕಾಗುತ್ತದೆ. ಈ ಹಣವೆಲ್ಲಾ ನೀರಿನಲ್ಲಿ ಹೋಮ ಮಾಡಿದ ಹಾಗಾಗುತ್ತದೆ. ಈ ಹಣವನ್ನು ಕೂಡ ಬಡವರ ಮೇಲೆಯೇ ಹಾಕುತ್ತಾರೆ. ಬಡವರಿಗೆ ಹೊರೆಯಾಗಲು ಶಾಸಕರೇ ಹೊಣೆಯಾಗುತ್ತಾರೆ ಎಂದರು.
ಯಾವುದೇ ಕಾರಣಕ್ಕೂ ಮೂಲಭೂತ ಸೌಲಭ್ಯ ಒದಗಿಸದೆ ಅವುಗಳನ್ನು ಉದ್ಘಾಟಿಸಬಾರದು. ಅಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕೂಡ. ಇದೆ. ತುಂಗೆ ಹತ್ತಿರ ಇದ್ದರೂ ತರಾತುರಿಯಲ್ಲಿ ಬೋರ್‌ವೆಲ್‌ಗಳನ್ನು ತೆಗೆಸಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಇದು ನಗರ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮಾಂತರ ವ್ಯಾಪ್ತಿಗೆ ಬರುತ್ತದೆ ಎಂಬ ಹಾರಿಕೆ ಉತ್ತರ ಕೊಡುತ್ತಾರೆ. ಶುದ್ಧ ನೀರು ಕೊಡಲು ಏಕೆ ಅಂತರ ಬೇಕು. ಇದು ಬಿಜೆಪಿಯ ಅವಾಂತರವಷ್ಟೆ. ಹೀಗೆ ಮೂಲಭೂತ ಸೌಕರ್ಯ ಒದಗಿಸಲು ಟೆಂಡರ್ ಕರೆಯಬೇಕು. ಆದರೆ ಬಹುಶಃ ಶೇ.೪೦ರಷ್ಟು ಕಮಿಷನ್ ಕೊಟ್ಟು ಕೆಲಸ ಮಾಡಲು ಯಾವ ಗುತ್ತಿಗೆದಾರನೂ ಬಂದಿರಲಿಕ್ಕಿಲ್ಲ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್ ಹೆಗಡೆ, ದೀಪಕ್ ಸಿಂಗ್, ಶಿವಾನಂದ್, ಶ್ಯಾಮಸುಂದರ್, ಆರ್.ಸಿ.ನಾಯಕ್ ಮುಂತಾದವರಿದ್ದರು.