Site icon TUNGATARANGA

ರಾಜ್ಯ ಸರ್ಕಾರ ರೈತರ ಸಮಸ್ಯೆ ಪರಿಹರಿಸುವಲ್ಲಿ ವಿಫಲ: ತೀ.ನಾ.ಶ್ರೀನಿವಾಸ್ ಆರೋಪ

: ರಾಜ್ಯ ಸರ್ಕಾರ  ಜಿಲ್ಲೆಯ  ರೈತರ ಸಮಸ್ಯೆ ಪರಿಹರಿಸುವಲ್ಲಿ ನಿರ್ಲಕ್ಷ್ಯ ಮಾಡಿದ್ದು, ಇದನ್ನು ಖಂಡಿಸಿ ಹೋರಾಟ ತೀವ್ರಗೊಳಿಸಲಾಗುವುದೆಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಗೆ ಸಿಎಂ  ಬಸವರಾಜ ಬೊಮ್ಮಾಯಿ ಬಂದಾಗ ಬಗರ್‌ಹುಕುಂ ರೈತರು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಈ ಭರವಸೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗಿನಿಂದಲೂ ಇದ್ದು, ಇದುವರೆಗೂ ಈಡೇರಿಲ್ಲ ಎಂದರು.

ರಾಜ್ಯದಲ್ಲಿ ಸುಮಾರು 3 ಲಕ್ಷ ರೈತರು ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದು, ಇವರಿಗೆ ಅರಣ್ಯಹಕ್ಕು ಅಡಿಯಲ್ಲಿ ಭೂಮಿ ನೀಡಬಹುದಿತ್ತು. ಆದರೆ ಅರ್ಜಿಗಳನ್ನು ವಜಾ ಮಾಡಲಾಗಿದೆ. ಹೊಸದಾಗಿ ಸಲ್ಲಿಸಿರುವ ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂದು ದೂರಿದರು.

ಅರಣ್ಯ ಭೂಮಿ ಸಾಗುವಳಿ ಮಾಡಿದವರಿಗೆ ನೈಸರ್ಗಿಕ ನ್ಯಾಯ ಕೊಡುವಂತೆ 28.2.2019 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಕೂಡ ಆ ಕೆಲಸ ಮಾಡಿಲ್ಲ. ಕೈಬರಹದ ಪಹಣಿ ಇದ್ದರೆ 3 ಎಕರೆವರೆಗೆ ಮಂಜೂರಾತಿ ಮಾಡುವ ಅವಕಾಶವಿದ್ದರೂ ಕೂಡ ಅರ್ಜಿಗಳನ್ನು ಪರಿಗಣನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶರಾವತಿ ಸಂತ್ರಸ್ತರ ಬಗ್ಗೆ ಒಂದು ವರ್ಷದ ಹಿಂದೆ ಸಂಜೆ ಮಾಡಲಾಗಿತ್ತು. ಈಗ ಎರಡು ದಿನಗಳ ಹಿಂದೆ ಸಂಜೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿರುವುದಾಗಿ ಹೇಳಿದ್ದಾರೆ. ಈ ಕೆಲಸವನ್ನು ಹಿಂದೆಯೇ ಮಾಡಬಹುದಿತ್ತು. ಸೋಗಾನೆ ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟಿರುವ ರೈತರಿಗೆ ಇನ್ನೂ ನಿವೇಶನ ನೀಡಿಲ್ಲ. ನಿಲ್ದಾಣ ಉದ್ಘಾಟನೆಗೆ ಬರುವ ಪ್ರಧಾನಿ ಅವರಿಂದಲೇ ಶರಾವತಿ ಸಂತ್ರಸ್ತರಿಗೆ ಹಾಗೂ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದವರಗೆ ಹಕ್ಕು ಪತ್ರಗಳನ್ನು ಕೊಡಿಸುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪರಶುರಾಮ್, ತವನಂದಿ ಶಿವಪ್ಪ ಮತ್ತಿತರರು ಇದ್ದರು.

Exit mobile version