Site icon TUNGATARANGA

ಶ್ರೀಸಾಮಾನ್ಯನಿಗೆ ಶ್ರೀರಕ್ಷೆಯ ಅಭಯ ನೀಡಿದ ಕೇಂದ್ರ ಬಜೆಟ್ :- ಎಸ್.ಎಸ್. ಜ್ಯೋತಿಪ್ರಕಾಶ್

ಭಾರತವು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಹೊಸ ಅವಕಾಶಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿರುವ ಮುಂಚೂಣಿ ದೇಶವಾಗಿ ಜಾಗತಿಕ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಂಡಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಅನೇಕ ದೂರದೃಷ್ಟಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಅನೇಕ ಪ್ರಮುಖ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹಾಗೂ ಕೂಡುಕೊಳ್ಳುವಿಕೆ ಹೊಂದುವ ಮೂಲಕ ತನ್ನ ದಿಟ್ಟತನವನ್ನು ತೋರಿಸುತ್ತಿದೆ. ಸರ್ವರನ್ನು ಆರ್ಥಿಕವಾಗಿ ಮೇಲೆತ್ತಲು ಕ್ರಮಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಿನ್ನೆ ಕೇಂದ್ರ ಸರ್ಕಾರ ಮಂಡಿಸಿದ ೨೦೨೩/೨೪ನೇ ಸಾಲಿನ ಬಜೆಟ್ ದೇಶದ ಶ್ರೀಸಾಮಾನ್ಯನಿಗೆ ಶ್ರೀರಕ್ಷೇಯ ಅಭಯ ನೀಡಿದಂತಹ ಅತ್ಯುತ್ತಮ ಆಯವ್ಯಯ ಎಂದು ಎ.ಪಿ.ಎಂ.ಸಿ ಮತ್ತು ಸೂಡಾ ನಿಕಟ ಪೂರ್ವ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಹೇಳಿದರು.

ರಾಜ್ಯದ ಮಲೆನಾಡು, ಅರೆ ಮಲೆನಾಡು ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು ೫,೩೦೦ ಕೋಟಿ ಅನುದಾನ ಒದಗಿಸಿರುವುದು ಸಂತೋಷದ ಸಂಗತಿಯಾಗಿದ್ದು ಬಹಳ ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಮಹತ್ವಪೂರ್ಣ ಯೋಜನೆಗೆ ಈ ಮೂಲಕ ಬಲ ತಂದಿದೆ. ರಾಜ್ಯದ ಬರ ಪರಿಹಾರ ನಿರ್ವಹಣೆಗೆ ೫,೩೦೦ ಕೋಟಿ ನೀಡಿರುವುದು ಕೂಡ ಸ್ವಾಗತಾರ್ಹ ಎಂದರು.

ಕೇಂದ್ರ ಸರ್ಕಾರ ತನ್ನ ಪ್ರತಿವರ್ಷದ ಬಜೆಟ್ ನಲ್ಲಿ ಹೊಸ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವುದು ಸರ್ವೇ ಸಾಮಾನ್ಯ. ಅದೇ ರೀತಿ ಈ ವರ್ಷ ಮಂಡಿಸಿರುವ “ಅಮೃತ್ ಕಾಲ್” ಬಜೆಟ್ ನಲ್ಲಿ ಹಸಿರು-ಆಹಾರ-ಆರೋಗ್ಯ-ಕೈಗಾರಿಕಾ-ಕೃಷಿ-ಯುವ ಶಕ್ತಿ-ರೈತ ಕ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು. ದೇಶದ ಮಧ್ಯಮ ವರ್ಗದ ಜನಗಳನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ಪಾವತಿಯನ್ನು ೭.೦೦ಲಕ್ಷದ ವರೆಗೆ ಹೆಚ್ಚಿಸಿರುವುದು ಐತಿಹಾಸಿಕ ನಿರ್ಣಯವಾಗಿದೆ ಎಂದಿರುವ ಅವರು, ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ೭೮,೦೦೦ ಕೋಟಿ ನೀಡಿರುವುದು ಮಹತ್ವದ ನಿರ್ಧಾರವಾಗಿದೆ ಎಂದರು.

ಈಗಾಗಲೇ ಜಾಗತಿಕವಾಗಿ ಗುರುತಿಸಿಕೊಂಡಿರುವ ಸಿರಿಧಾನ್ಯಗಳ ಆಹಾರ ಕ್ರಮಕ್ಕೆ ಇನ್ನಷ್ಟು ಉತ್ತೇಜನ ನೀಡಲು ಯೋಜನೆ ರೂಪಿಸಿರುವುದು ಸ್ವಾಗತಾರ್ಹವಾಗಿದ್ದು, ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಅನೇಕ ಮಹತ್ವಪೂರ್ಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸುಮಾರು ೨೦ಲಕ್ಷ ಕೋಟಿ ಸಾಲ ನೀಡುವ ಯೋಜನೆ ಹಾಕಿಕೊಂಡಿರುವುದು ರೈತರ ಮೊಗದಲ್ಲಿ ಹೊಸ ಆಸೆಯೊಂದು ಚಿಗುರೋಡಿದಿದೆ ಎಂದರು.

ಇದರೊಂದಿಗೆ ದೇಶದಾದ್ಯಂತ ೫೦ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸುವುದು, ಪ್ರವಾಸೋದ್ಯಮವನ್ನು ಉತ್ತೇಜಿಸಲೂ ದೇಶದಲ್ಲಿ ಏಕ ರೀತಿಯ ತಂತ್ರಾಂಶ ಅಭಿವೃದ್ಧಿ ಪಡಿಸುವುದು, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ೭.೫% ಬಡ್ಡಿ ದರದಲ್ಲಿ ಮಹಿಳಾ ಸಮ್ಮಾನ್ ಯೋಜನೆ ಮೂಲಕ ೨ ಲಕ್ಷದ ವರೆಗಿನ ಹಣಕ್ಕೆ ಬಡ್ಡಿ ನೀಡುವುದು, ಹಿರಿಯ ನಾಗರಿಕರಿಗೆ ಪ್ರೋತ್ಸಾಹಿಸುವುದು, ಐತಿಹಾಸಿಕ ೫ಜಿ ತಂತ್ರಾಂಶವನ್ನು ಇನ್ನಷ್ಟು ಸಂಶೋಧಿಸುವ ದೃಷ್ಟಿಯಿಂದ ೧೦೦ಕ್ಕೂ ಅಧಿಕ ಲ್ಯಾಬ್ ಗಳನ್ನು ಸ್ಥಾಪಿಸುವುದು, ೩೦ ಅಂತರರಾಷ್ಟ್ರೀಯ ಸೌಲಭ್ಯವುಳ್ಳ ಕೌಶಲ್ಯ ಕೇಂದ್ರ ಸ್ಥಾಪಿಸುವುದು ಈ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಸುವುದು ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.

ರಸಗೊಬ್ಬರ ಸಮ ಪ್ರಮಾಣದಲ್ಲಿ ಬಳಸಲು ಪಿ.ಎಂ ಪ್ರಣಾಮ್ ಯೋಜನೆ ಜಾರಿಗೆ ತರುವುದು, ಉದ್ಯೋಗ ಸೃಷ್ಟಿಗೆ ೧೦ ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿರುವುದು, ರಕ್ಷಣಾ ಇಲಾಖೆಯನ್ನು ಎಲ್ಲಾ ರೀತಿಯಲ್ಲಿ ಮತ್ತಷ್ಟು ಮೇಲೆತ್ತಲು ೫.೮೦ ಲಕ್ಷ ಕೋಟಿ ಅನುದಾನ ನೀಡಿರುವುದು, ಕುಶಲ ಕಾರ್ಮಿಕರಿಗೆ ಸಹಾಯಧನ ನೀಡುವುದು ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತರುವುದಾಗಿ ಉಲ್ಲೇಖಿಸಿರುವುದು ಸಬ್ ಕಾ ಸಾಥ್-ಸಬ್ ಕಾ ವಿಶ್ವಾಸ್-ಸಬ್ ಕಾ ಪ್ರಯಾಸ್ ಘೋಷಣೆಯನ್ನು ಎತ್ತಿ ಹಿಡಿಯುವ ಬಜೆಟ್ ಇದಾಗಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version