Site icon TUNGATARANGA

ಗೋಕುಲ ನಿರ್ಗಮನ…ಕಣ್ಣಿಗೆ ಹಬ್ಬವನ್ನು ನೀಡುವಂತೆ ನಿರ್ದೇಶಿಸಿದ ಡಾ. ಕೆ.ಎಸ್.ಪವಿತ್ರಾ


ಶಿವಮೊಗ್ಗ ಶ್ರೀ ವಿಜಯದಿಂದ ಆಯೋಜಿಸಿದ “ಗೋಕುಲ ನಿರ್ಗಮನ” ನೃತ್ಯವು ಪ್ರೇಕ್ಷಕರ ಕಣ್ಮನ ಸೆಳೆದು ನೋಡುಗರಿಗೆ ಆಹ್ಲಾದವನ್ನು ನೀಡಿತೆಂದರೆ ಅತಿಶಯೋಕ್ತಿಯಾಗಲಾರದು. ಪು.ತಿ.ನ. ಅವರ ’ಗೋಕುಲ ನಿರ್ಗಮನ’ವು ಗೀತನಾಟಕಗಳಲ್ಲಿ ವಿಶಿಷ್ಟವಾದು.ಕವಿ ತಾವೇ ಹೇಳುವಂತೆ – ಕೃತಿ ರಚಿಸಲು ಪ್ರೇರಣೆಯಾದ ಅಂಶವೆಂದರೆ ಒಮ್ಮೆ ಅವರೆಲ್ಲೋ ಕೇಳಿದ ಗೊಲ್ಲ ಹುಡುಗರ ವೇಣುಗಾನ. ಆ ಗಾನ ಅವರನ್ನು ಕರೆದೊಯ್ಯುವುದು ನಂದಗೋಕುಲಕ್ಕೇ
…,


ಅಲ್ಲಿ ಅವರು ಬಹುಮುಖ್ಯವಾಗಿ ಗೋಪಿಕಾ ಸ್ತ್ರೀಯರಷ್ಟೇ ಅಲ್ಲ ವೃದ್ಧರು, ಋಷಿಗಳು ಎಲ್ಲರೂ ಕೃಷ್ಣನ ಮುರಳಿಯನಾದಕ್ಕೆ ಮರುಳಾಗಿರುವುದನ್ನು ನೋಡುತ್ತಾರೆ. ಕೃಷ್ಣ ಬರಿ ಗೋಕುಲಕ್ಕಷ್ಟೇ ಅಲ್ಲ ಜಗತ್ತಿಗೇ ಎಂಬುದಾಗಿ ಆತನನ್ನು ಕರೆದೊಯ್ಯಲು ಅಕ್ರೂರನ ಆಗಮನವಾಗುತ್ತದೆ. ರಾತ್ರಿಯಲ್ಲಿ ಬರುವ ಆತ ಬಲರಾಮ ಕೃಷ್ಣರನ್ನು ಬಿಲ್ಲ ಹಬ್ಬಕ್ಕೆ ಆಹ್ವಾನಿಸುತ್ತಾನೆ. ಕೃಷ್ಣ ಕೊಳಲನ್ನು ತ್ಯಜಿಸಿ ಮಧುರೆಗೆ ಹೊರಡುತ್ತಾನೆ. ವಿರಹದುರಿಯಿಂದ ಪರಿತಪಿಸುವ ರಾಧೆ ಮತ್ತವಳ ಗೆಳತಿಯರು ಆ ಕೃಷ್ಣನ ಕೊಳಲನ್ನು ಬೃಂದಾವನ ದೇವಿಯ ಮರದ ಬುಡದಲ್ಲಿ ಅಡಗಿಸಿಡುತ್ತಾರೆ. ಕೃಷ್ಣನ ಕೊಳಲಿನ ನಾದವಿಲ್ಲದೇ ಜಗತ್ತಿಗೆ ಶೂನ್ಯ ಆವರಿಸಿ ಸಾವಿರಾರು ವರ್ಷಗಳು ಸಂದ ಮೇಲೆ ಕವಿಯ ಭಾವದೆರೆ ತೆರೆದು ತನ್ನ ನಾದದ ನೆನಪನ್ನು ಕೊಳಲು ಗಿಡ-ಮರ-ಬಳ್ಳಿಗಳ ಉಲಿಯಲ್ಲಿ ಸಾರುತ್ತ ಮತ್ತೆ ಕೆಣಕದೆ ತಣಿಯುವ ಹೊತ್ತಿಗೆ ಗೋಕುಲ ನಿರ್ಗಮನ ಕೊನೆಗೂಳ್ಳುವುದು ಇದರ ಕಥಾವಸ್ತುವಾಗಿದೆ.


ಈ ಕತೆಯನ್ನು ಇಟ್ಟುಕೊಂಡು ರಂಗಕ್ಕೆ ಒಪ್ಪುವಂತೆ ಸುಧೀರ್ಘದ ನಾಟ್ಯವನ್ನು ಡಾ. ಕೆ.ಎಸ್.ಪವಿತ್ರಾ ಅವರು ’ಸಕಲೇಂದ್ರಿಯಗಳಲ್ಲಿ ನೇತ್ರವೇ ಮಿಗಿಲು…’ ಎಂಬ ಗೋಕುಲ ನಿರ್ಗಮನದ್ದೇ ಸಾಲಿನಂತೆ ಕಣ್ಣಿಗೆ ಹಬ್ಬವನ್ನು ನೀಡುವಂತೆ ನಿರ್ದೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭದಲ್ಲಿ ಗೋಪಬಾಲರಾಗಿ ನುಡಿಸಿದ ಮುರಳಿಯ ನಾದಕ್ಕೆ ಪ್ರೇಕ್ಷಕರೆಲ್ಲರೂ ತಲೆಯಾಡಿಸುವಂತೆ ಮಾಡಿ ನೋಡುಗರ ಮನೆಗೆದ್ದಿದ್ದು ಪುಟ್ಟ ಮಕ್ಕಳಾದ ಭರತವರ್ಷ ಮತ್ತು ಸುಮೇದ್. ಅದು ಕವಿಗಷ್ಟೇ ಅಲ್ಲ ನಮ್ಮೆಲ್ಲರನ್ನೂ ಗೋಕುಲದತ್ತ ಸೆಳೆಯುವವಂತಾಯ್ತು.


ಅದ್ಭುತವಾದ ರಂಗಸಜ್ಜಿಕೆ, ಶ್ರೀಮಂತ ಪ್ರಸಾದನ, ಉತ್ತಮ ಬೆಳಕಿನ ನಿರ್ವಹಣೆ ಎಂತಹವರನ್ನೂ ಸೆಳೆದು ನಿಜವಾದ ನಂದಗೋಕುಲವೇ ಕಣ್ಣ ಮುಂದಿದೆ ಎನ್ನುವಂತಾಗಿತ್ತು. ’ಎನ್ನೀ ಕೊಳಲಿದು ಕಾಡಿನ ಬಿದಿರು, ಈ ಹುಲು ಕಡ್ಡಿಗೆ ಎನಿತೋ ಚದುರು… ಈ ಬೃಂದಾವನ ನಾದಮಯ, ಪ್ರಾಣತರಂಗಿತ ನಾದ ತರಂಗ… ನಾದ ತರಂಗಿತ ಪ್ರಾಣ ತರಂಗ… ಎನ್ನುವ ಹಾಡುಗಳ ಸಂಗೀತ ಸಂಯೋಜನೆಯು ಮನಸ್ಸಿಗೆ ಮುದನೀಡುವಂತಿತ್ತು. ವಿ. ಮಹೇಶ ಸ್ವಾಮಿಯವರಿಗೆ ಕೃತಜ್ಞತೆ ಸಲ್ಲಲೇಬೇಕು. ವಿ. ಡಿ. ವಿ. ಪ್ರಸನ್ನಕುಮಾರ್ ಅವರ ಕಂಠದಲ್ಲಿ ಮೂಡಿಬಂದ ನಟುವಾಂಗವಂತೂ ಅದ್ಭುತಕ್ಕಿಂತಲೂ ಮಿಗಿಲು. ಇನ್ನು ವಿ. ಗಣೇಶ್ ದೇಸಾಯಿ ಮತ್ತು ವಿ. ಚಾಂದಿನಿ ಗರ್ತಿಕೆರೆ ಇವರೀರ್ವರ ಸಿರಿಕಂಠದಲ್ಲಿ ಹಾಡಿದ ಹಾಡೆಲ್ಲವೂ ಕೃಷ್ಣನ ಕೊಳಲಿನ ನಾದದಂತೆ ಇಂಪಾಗಿತ್ತು.


ಕಾಳಿಂಗ ಮರ್ದನ ನೃತ್ಯದ ಸನ್ನಿವೇಶ, ಬಿಲ್ಲಹಬ್ಬದ ವರ್ಣನೆ, ಗೋಪಿಕೆಯರ ಪ್ರೀತಿ, ಕೊನೆಯ ದೃಶ್ಯ ’ಕೊಳಲನೂದು ಗೋವಿಂದ ಮುಪ್ಪಿಗಾಗಲಾನಂದ…’,
ಬಾಳೆ ಸನಿಹ ಸಾವು ದೂರ… ಎಂಬ ತೆರದ ನಂಬಿಕೆ ಬರೆ… ಎಂಬ ಹಾಡಿಗೆ ಮಾಡಿದ ನೃತ್ಯ, ಕೃಷ್ಣ, ಅಕ್ರೂರ ರಾಧೆಯರಾದ ಡಾ. ಕೆ. ಎಸ್. ಪವಿತ್ರಾ, ಡಾ. ಕೆ. ಎಸ್.ಚೈತ್ರಾ, ಡಾ. ಕೆ. ಎಸ್. ಶುಭ್ರತಾ ಹಾಗೂ ಗೋಪಿಕೆಯರು, ಗೋಪರು, ಪುಟ್ಟಗೋವಳ ಹೀಗೆ ಎಲ್ಲರ ಪಾತ್ರವೂ ಹೃನ್ಮನಕ್ಕೆ ಸಂತಸ ನೀಡಿ “ಅಂತು ಬಲು ಹಿರಿದಾಯ್ತು ಸಂಮೋದವು…” ಎಂಬುದು ಸಾರ್ಥಕವಾಯ್ತು. ಸಹೃದಯರ ಹೃದಯ ಗೆದ್ದ ಆಯೋಜಕರಿಗಂತೂ ಹಾಟ್ಸ್ ಆಫ್ ಹೇಳಲೇಬೇಕು.
-ಡಾ. ಮೈತ್ರೇಯಿಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು, ಶಿವಮೊಗ್ಗ.

Exit mobile version