Site icon TUNGATARANGA

ಮಧ್ಯದಂಗಡಿಗಳ ನಿಯಂತ್ರಣಕ್ಕೆ ಸೂಚನೆ : ಆರಗ ಜ್ಞಾನೇಂದ್ರ


ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸ್ಥಳಗಳ ಸಮೀಪದಲ್ಲಿ ಮದ್ಯದಂಗಡಿಗಳು ತಲೆ ಎತ್ತುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜಿಲ್ಲಾ ಅಬಕಾರಿ ಅಧೀಕ್ಷಕರಿಗೆ ಸೂಚಿಸಿದರು.


ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ರಾಜ್ಯ ರೇಷ್ಮೇ, ಯುಸ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ||ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ೨೦೨೨ರ ಮಾಸಾಂತ್ಯದವರೆಗಿನ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ಸೊರಬದ ಮುಖ್ಯರಸ್ತೆಯಲ್ಲಿರುವ ಶ್ರೀ ರಂಗನಾಥ ದೇವಾಲಯದ ಸಮೀಪದಲ್ಲಿಯೂ ಮದ್ಯದಂಗಡಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಇದನ್ನೂ ಸಹ ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದರು.


ಮದ್ಯದಂಗಡಿಗಳಿಗೆ ಈಗಾಗಲೇ ನೀಡಿರುವ ಇಂತಹ ಘಟಕಗಳ ಅನುಮತಿಯನ್ನು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಆದರೆ, ಸದರಿ ಅಂಗಡಿಗಳ ಮಾಲೀಕರು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದರಿಂದ ನ್ಯಾಯಾಲಯದ ತೀರ್ಪಿನ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಸಚಿವರಿಗೆ ತಿಳಿಸಿದರು.


ಗ್ರಾಮೀಣ ರೈತರು ಬೆಳೆವಿಮೆ ಮಾಡಿಸುವಲ್ಲಿ ಹಿಂದೆ ಸರಿಯುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಕೃಷಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ವಿಮೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಅವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಈ ಹಿಂದೆ ಬೆಳೆ ವಿಮೆ ಮಾಡಿಸುವುದು ಕಡ್ಡಾಯವಾಗಿತ್ತು. ಆದರೆ, ಕಳೆದ ಸಾಲಿನಿಂದ ಬೆಳೆ ರೈತರ ವಿವೇಚನೆಗೆ ಬಿಟ್ಟ ಕಾರಣ ಬೆಳೆ ವಿಮೆ ಮಾಡಿಸುವಲ್ಲಿ ರೈತರು ಹಿಂದೆ ಸರಿಯುವಂತಾಗಿದೆ ಎಂದವರು ಸಭೆಗೆ ತಿಳಿಸಿದರು.


ಜಿಲ್ಲೆಯ ತೀರ್ಥಹಳ್ಳಿ ಸೇರಿದಂತೆ ವಿವಿಧ ಕ್ವಾರಿಗಳಿಂದ ಮರಳನ್ನು ಅಕ್ರಮ ಸಾಗಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಮಾತ್ರವಲ್ಲ ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಅಗತ್ಯವಿರುವೆಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಅಕ್ರಮವನ್ನು ತಡೆಗಟ್ಟುವಂತೆ ಹಾಗೂ ಸದರಿ ಕ್ವಾರಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಅದರ ಚಿತ್ರಿತ ಭಾಗಗಳನ್ನು ಮಾಹೆಯಾನ ಸಂಬಂಧಿಸಿದ ವ್ಯಾಪ್ತಿಯ ಪೊಲೀಸ್ ಠಾಣೆಗೆ ತಲುಪಿಸಬೇಕು ಎಂದು ಗೃಹ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳನ್ನು ನಿಯೋಜಿಸಿ, ಅಕ್ರಮ ಮರಳು ಸಾಕಾಣಿಕೆಯನ್ನು ನಿಯಂತ್ರಿಸಲು ಕ್ರಮ ವಹಿಸಲಾಗುವುದು ಎಂದರು.


ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನ್ನಟ್ಟಿ ಗೌರಿಕೆರೆಗೆ ಹೋಗುವ ರಸ್ತೆಗೆ ನಡೆಸಲಾಗಿರುವ ರಸ್ತೆ ಕಾಮಗಾರಿ ಅತ್ಯಲ್ಪ ಅವಧಿಯಲ್ಲಿ ನಾಶವಾಗಿರುವುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಪ್ರಶ್ನಿಸಿ, ಸಂಬಂಧಿಸಿದ ಅಧಿಕಾರಿಗಳು ಉತ್ತರಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಕಾರ್ಪೋರೇಶನ್‌ನ ಇಂಜಿನಿಯರ್ ಅವರಿಂದ ಸಮಗ್ರ ತನಿಖೆ ನಡೆಸಿ, ೧೫ದಿನಗಳಲ್ಲಿ ವರದಿ ಪಡೆದು, ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಶಾಸಕರಿಗೆ ತಿಳಿಸಿದರು.
ಸಭೆಯಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ರುದ್ರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version