ಶಿವಮೊಗ್ಗ,ಸೆ.23:
ಶಿವಮೊಗ್ಗ ಡಿಸಿಸಿ ಬ್ಯಾಂಕ್‍ನ ಎಲ್ಲಾ ವ್ಯವಹಾರದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿಯ ನೂತನ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಸಿಸಿ ಬ್ಯಾಂಕ್‍ನಿಂದ ನೀಡಿರುವ ಹೆಚ್ಚುವರಿ ಸಾಲ ವಿತರಣೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಹೆಚ್ಚುವರಿ ಸಾಲ ವಿತರಣೆಯಲ್ಲಿ 1 ಲಕ್ಷಕ್ಕೆ 2 ಸಾವಿರ ರೂ. ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ತೀರ್ಥಹಳ್ಳಿ ಭಾಗದ ರೈತರಿಗೆ 1 ಕೋಟಿ ರೂ. ಸಾಲ ನೀಡಬೇಕಾಗಿತ್ತು. ಆದರೆ 25 ಲಕ್ಷ ರೂ. ಸಾಲ ನೀಡಲಾಗಿದೆ. ಇದಕ್ಕೆ ಬ್ಯಾಂಕ್‍ನ ಎಂಡಿಯವರು ಉತ್ತರಿಸಬೇಕಾಗಿದೆ ಎಂದರು.
ರಿಪ್ಪನ್‍ಪೇಟೆಯಲ್ಲಿ ಬ್ಯಾಂಕ್ ಕಟ್ಟಿಸಿದ ಡಾಟಾ ಎಂಟ್ರಿ ಕಟ್ಟಡದಲ್ಲಿ ಹಾಗೂ ಶಿವಮೊಗ್ಗ ಬ್ಯಾಂಕ್ ಕಟ್ಟಡದ ನವೀಕರಣ ಮತ್ತು ಮುಖ ಮಂಟಪ ನಿರ್ಮಾಣದಲ್ಲೂ ಭ್ರಷ್ಟಾಚಾರ ನಡೆದಿದೆ. ಬ್ಯಾಂಕ್ ನೌಕರರ ನೇಮಕಾತಿಯಲ್ಲಿ ಲಂಚ ಪಡೆಯಲಾಗಿದೆ. ಬ್ಯಾಂಕ್‍ನ ನಕಲಿ ಬಂಗಾರದ ಹಗರಣ , ಕೃಷಿಗೆ ಸಂಬಂಧಿಸಿದ ಜಿಲ್ಲಾ ರೈತರಿಗೆ ನೀಡಬೇಕಾದ ಕೃಷಿ ಸಾಲವನ್ನು, ಕಾನೂನುಬಾಹಿರವಾಗಿ ಮಂಡ್ಯ ಭಾಗದ ಕಬ್ಬು ಕಾರ್ಖಾನೆಗೆ 95 ಕೋಟಿ ರೂ. ಸಾಲ ನೀಡಿರುವ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕಳೆದ 25 ವರ್ಷಗಳಿಂದ ಬ್ಯಾಂಕ್‍ನ ಅಧ್ಯಕ್ಷರಾಗಿ ಆರ್.ಎಂ.ಮಂಜುನಾಥಗೌಡರು ಚುನಾವಣೆಯನ್ನು ಹೊರತುಪಡಿಸಿ ಡಿಸಿಸಿ ಬ್ಯಾಂಕ್‍ನ ಕಾರನ್ನು ಅನೇಕ ಪಕ್ಷಗಳ ಕಾರ್ಯಕ್ರಮಗಳಿಗೆ ಹಾಗೂ ತಮ್ಮ ಎಲ್ಲ ಖಾಸಗಿ ಕಾರ್ಯಕ್ರಮಗಳಿಗೆ ಬಳಸಿಕೊಂಡು ಬರುತ್ತಿದ್ದಾರೆ. ರೈತರ ಹಣವನ್ನು ಈ ರೀತಿ ದುಂದುವೆಚ್ಚ, ದುರುಪಯೋಗ ಎಷ್ಟರಮಟ್ಟಿಗೆ ಸಮಂಜಸ ಎಂದು ತಿಳಿಯುತ್ತಿಲ್ಲ ಎಂದರು.
ಭ್ರಷ್ಟಾಚಾರವನ್ನು ಮರೆಮಾಚಲು ಹಾಗೂ ನೈತಿಕ ಜವಾಬ್ದಾರಿಯಿಂದ ಹೊರಬರಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಆರ್.ಎಂ.ಮಂಜುನಾಥ ಗೌಡರು ಮುಂದಾಗಿದ್ದು, ಬ್ಯಾಂಕ್‍ನ ಭ್ರಷ್ಟಾಚಾರದ ತನಿಖೆ ಮುಗಿಯುವವರೆಗೂ ಇವರು ಅಧ್ಯಕ್ಷರಾಗಿ ಮುಂದುವರೆಯುವುದು ಒಳ್ಳೆಯದು ಎಂದರು.
ಬ್ಯಾಂಕ್‍ನ ಅಧ್ಯಕ್ಷರ ಆಪಾದನೆಗಳಿಗೆ ಸಮಗ್ರ ತನಿಖೆಯ ಅಗತ್ಯವಿದೆ. ಈ ಹಿಂದೆ ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ಸಿಬಿಐ ತನಿಖೆಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದ್ದರಿಂದ ಸರ್ಕಾರ ಸಾರ್ವಜನಿಕರ ಹಿತಾಸಕ್ತಿ ಮನಗಂಡು ಸಮಗ್ರ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪಕ್ಷದ ಮುಖಂಡರಾದ ಕೆ.ದೇವೇಂದ್ರಪ್ಪ, ವಿಜಯಕುಮಾರ್, ಕೆಸ್ತೂರ್ ಮಂಜುನಾಥ್ ಇದ್ದರು.
ಅಭಿನಂದನೆ
ತಮ್ಮನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಿಮ್ಮನೆ ರತ್ನಾಕರ್ ಅಭಿನಂದಿಸಿದರು.
ಕೆಪಿಸಿಸಿ ಅಧ್ಯಕ್ಷರು ತಮಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಪ್ರಚಲಿತ ವಿದ್ಯಮಾನದಲ್ಲಿ ಪಕ್ಷದ ನಡೆಯನ್ನು ಸಮರ್ಥಿಸಿಕೊಳ್ಳುವ ಹಾಗೂ ಪಕ್ಷದ ಧ್ಯೇಯೋದ್ದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಧ್ಯಮಗಳಿಗೆ ತಲುಪಿಸುವ ಕೆಲಸ ನಿರ್ವಹಿಸುವೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇಲ್ಲ. ನಾಯಕತ್ವದಲ್ಲಿ ಎಲ್ಲಿಯೂ ಎಡವಿಯೂ ಇಲ್ಲ. ಬಿಜೆಪಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬಂದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ ನೀತಿ ಬದಿಗಿಟ್ಟು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದೆ. ಧರ್ಮವನ್ನು ಆಚೆಗೆ ಇಟ್ಟು ಚುನಾವಣೆ ಎದುರಿಸಿದರೆ 10 ಸ್ಥಾನವೂ ಲಭಿಸುವುದಿಲ್ಲ ಎಂದರು.