Site icon TUNGATARANGA

ಪೌರಕಾರ್ಮಿಕರ ಕಾಲಿಗೆ ನಮಸ್ಕರಿಸಿದ ಮೇಯರ್, ಉಪಮೇಯರ್ ರಿಂದ ಅವರಿಗೆ ಮನೆ ನಿರ್ಮಿಸುವ ಭರವಸೆ

ಪೌರ ಕಾರ್ಮಿಕರ ಕಾಲಿಗೆ ಬಿದ್ದು ನಮಸ್ಕರಿಸಿ ಗೌರವ ಸಲ್ಲಿಸಿದ ಮೇಯರ್. ಉಪ ಮೇಯರ್. ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರು

ಶಿವಮೊಗ್ಗ,ಸೆ.23:
ಪೌರ ಕಾರ್ಮಿಕರ ಹಲವು ವರ್ಷಗಳ ಕನಸಾಗಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಅಕ್ಟೋಬರ್2 ಗಾಂಧೀ ಜಯಂತಿಯಂದು ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುವರ್ಣಾ ಶಂಕರ್ ಅವರು ತಿಳಿಸಿದರು.
ಅವರು ಇಂದು ಅಂಬೇಡ್ಕರ್ ಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಯೋಧರಂತೆ ಇಲ್ಲಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಪಾಲಿಕೆ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಹಾಗೂ ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕಲ್ಯಾಣ ಭವನ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಯನ್ನು ಸಹ ಗಾಂಧೀ ಜಯಂತಿಯಂದು ನಡೆಸಲಾಗುವುದು ಎಂದು ಅವರು ಹೇಳಿದರು.

ಪೌರಕಾರ್ಮಿಕರ ದಿನಾಚರಣೆ ಉದ್ಘಾಟನೆ


ಕರೋನಾ ವಾರಿಯರ್ಸ್ ಗಳಿಗೆ ಪರಿಹಾರ ಧನ:
ಪಾಲಿಕೆಯ ಇಬ್ಬರು ಪೌರಕಾರ್ಮಿಕರು ಕರೋನಾ ಪೀಡಿತರಾಗಿ ಸಾವನ್ನಪ್ಪಿದ್ದಾರೆ. ಸಾವಿಗೀಡಾಗುವ ಕರೋನಾ ವಾರಿಯರ್ಸ್‍ಗಳಿಗೆ ಸರ್ಕಾರ 30ಲಕ್ಷ ರೂ. ನೀಡಲಿದೆ. ಪಾಲಿಕೆ ವತಿಯಿಂದ ಕರೋನಾಗೆ ಬಲಿಯಾಗಿರುವ ಚನ್ನಮ್ಮ ಮತ್ತು ಪಾಪಾನಾಯ್ಕ ಅವರ ಕುಟುಂಬಕ್ಕೆ ತಲಾ 3ಲಕ್ಷ ರೂ. ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ. ಇದೇ ರೀತಿ ಮೃತರ ಕುಟುಂಬದಲ್ಲಿ ಒಬ್ಬರಿಗೆ ಪಾಲಿಕೆಯಲ್ಲಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಮಾತನಾಡಿ, ಪೌರಕಾರ್ಮಿಕರು ಕರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಸೇವೆ ಸಲ್ಲಿಸಿದ್ದಾರೆ. ಕರೋನಾ ಪಾಸಿಟಿವ್ ವ್ಯಕ್ತಿಗಳಿರುವ ಕಂಟೈನ್‍ಮೆಂಟ್ ಪ್ರದೇಶದಲ್ಲೂ ಸ್ವಚ್ಛತಾ ಕಾರ್ಯವನ್ನು ಪ್ರತಿನಿತ್ಯ ನಡೆಸಿದ್ದಾರೆ. ಕರೋನಾದಿಂದ ಸಾವಿಗೀಡಾದವರ ಅಂತ್ಯಸಂಸ್ಕಾರ ಕಾರ್ಯವನ್ನು ನಿರಂತರವಾಗಿ ಯಾವುದೇ ಚ್ಯುತಿ ಬಾರದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಪೌರಕಾರ್ಮಿಕರಿಗೆ ಆರೋಗ್ಯ ಸೇವೆ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಪಾಲಿಕೆ ವತಿಯಿಂದ ಕಲ್ಪಿಸಲು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಬೆಳ್ಳಿದೀಪ ಸನ್ಮಾನ:
ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ 5 ಮಂದಿ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಬೆಳ್ಳಿ ದೀಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಲ್ಲಾ ಪೌರಕಾರ್ಮಿಕರಿಗೂ ಈ ಬಾರಿ ಬೆಳ್ಳಿ ದೀಪವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಮೇಯರ್ ಈ ಸಂಧರ್ಭದಲ್ಲಿ ತಿಳಿಸಿದರು.
ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಚ್.ಸಿ.ಯೋಗೀಶ್, ಜ್ಞಾನೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version