Site icon TUNGATARANGA

ಎನ್‌ಇಎಸ್‌ನಲ್ಲಿ ಜ್ಞಾನದ ಹಬ್ಬಜ.23ರಂದು ಉಪನ್ಯಾಸ ಮಾಲಿಕೆಯ 9ನೇ ಸರಣಿ | ಜ.25ರಂದು ಸೌರ ವಿದ್ಯುತ್ ಘಟಕ ಉದ್ಘಾಟನೆ | ಜ.30ರಂದು ಸರ್ವೋದಯ ದಿನಾಚರಣೆ – ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ವಿವರಣೆ

 ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವದ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಇಎಸ್‌ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ತಿಳಿಸಿದರು.

 ಅವರು ಇಂದು ಸಂಸ್ಥೆಯ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1946ರಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಥಾಪನೆಗೊಂಡ ಎನ್‌ಇಎಸ್ ಕೇವಲ 16 ವಿದ್ಯಾರ್ಥಿಗಳಿಂದ ಆರಂಭಗೊಂಡು ಇಂದು 18 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳುವ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.

 36 ಶಾಲಾ ಕಾಲೇಜುಗಳು ಹಾಗೂ 1800 ಕ್ಕೂ ಹೆಚ್ಚು ಸಿಬ್ಬಂದಿಗಳು ವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. ಸಮಿತಿಯ ಅಮೃತ ಮಹೋತ್ಸವದ ಅಂಗವಾಗಿ ಅನೇಕ ಕ್ರಿಯಾಶೀಲ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಪ್ರತಿ ತಿಂಗಳು ವಿವಿಧ ಕ್ಷೇತ್ರಗಳ ಸಾಧಕರಿಂದ ಉಪನ್ಯಾಸ ಮಾಲಿಕೆ ಏರ್ಪಡಿಸಿಕೊಂಡು ಬರಲಾಗುತ್ತಿದೆ. ಇಸ್ರೋ ಮಾಜಿ ಅಧ್ಯಕ್ಷ ಡಾ.ಶಿವನ್ ಅವರಿಂದ ಆರಂಭಗೊAಡ ಉಪನ್ಯಾಸ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಶಿಕ್ಷಣ ತಜ್ಞರಾದ ವೈ.ಎಸ್.ವಿ.ದತ್ತ, ಡಾ.ಗುರುರಾಜ್ ಕರ್ಜುಗಿ, ಪತ್ರಕರ್ತ ವಿಶ್ವೇಶ್ವರಭಟ್, ನ್ಯಾಯಮೂರ್ತಿ ಕೃಷ್ಣದೀಕ್ಷಿತ್, ನಾಗರತ್ನ, ಖಾಜಿ, ವಕೀಲ ಅಶೋಕ್ ಹರ‍್ನಳ್ಳಿ, ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಅವರು ಉಪನ್ಯಾಸ ನೀಡಿದ್ದಾರೆ ಎಂದರು. 

 ಇದರ ಮುಂದುವರೆದ ಭಾಗವಾಗಿ ಜ.23ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಉಪನ್ಯಾಸ ಮಾಲಿಕೆಯ 9ನೇ ಸರಣಿಯನ್ನು ಏರ್ಪಡಿಸಲಾಗಿದ್ದು, ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪದ್ಮಭೂಷಣ ಪುರಸ್ಕೃತ ಡಾ.ಬಿ.ಎನ್.ಸುರೇಶ್ ಅವರು ರಾಷ್ಟ್ರಕ್ಕೆ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ: ಅಂದು,ಇಂದು ಮತ್ತು ಮುಂದು ಕುರಿತು ಮಾತನಾಡಲಿದ್ದಾರೆ ಎಂದರು. 

 ಜ.25ರ ಬೆಳಿಗ್ಗೆ 11 ಗಂಟೆಗೆ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ 400 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ ಎಂದರು. 

 ಜ.30ರ ಬೆಳಿಗ್ಗೆ 11 ಗಂಟೆಗೆ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಸಂಯುಕ್ತಾಶ್ರಯದಲ್ಲಿ ಸರ್ವೋದಯ ದಿನಾಚರಣೆ ಮತ್ತು ಕರ್ನಾಟಕ ರಾಜ್ಯ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಉದ್ಘಾಟಿಸಲಿದ್ದಾರೆ. ಮೇಲುಕೋಟೆ ಜನಪದ ಸೇವಾ ಟ್ರಸ್ಟ್ನ ಸುಮನಸ ಕೌಲಗಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಭಗವಂತರಾವ್ ಉಪಸ್ಥಿತರಿರುವರು ಎಂದ ಅವರು, ಈ 3 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ವಹಿಸಲಿದ್ದಾರೆ ಎಂದರು.

 ಪತ್ರಿಕಾಗೋಷ್ಟಿಯಲ್ಲಿ ಎನ್‌ಇಎಸ್ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ್, ಟಿ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಸಹಾಯಕ ಕುಲಸಚಿವ ಪ್ರೊ.ಎನ್.ಕೆ.ಹರಿಯಪ್ಪ, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್, ಡಾ.ಹೆಚ್.ಎನ್.ನಾಗಭೂಷಣ್ ಇನ್ನಿತರರು ಉಪಸ್ಥಿತರಿದ್ದರು. 

Exit mobile version