ಶಿವಮೊಗ್ಗ : ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಸಂಪೂರ್ಣ ಸ್ಥಗಿತವಾಗುವುದು ಖಚಿತವಾಗಿದೆ. ಸೈಲ್ ಆಡಳಿತ ಮಂಡಳಿ ಕಾರ್ಖಾನೆಯನ್ನು ಮುಚ್ಚಲು ತೀರ್ಮಾನ ಕೈಗೊಂಡಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಅದಕ್ಕೆ ತಡೆ ನೀಡಬಹುದು ಎನ್ನುವ ಆಶಾ ಭಾವನೆ ಇತ್ತು.
ಆದರೆ ಇಂದು ಶಿವಮೊಗ್ಗದಲ್ಲಿ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ವಿಐಎಸ್ಎಲ್ ಮುಚ್ಚುವ ನಿರ್ಧಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪರಿಸ್ಥಿತಿ ನಮ್ಮ ಕೈ ಮೀರಿ ಹೋಗಿದೆ ಎಂದರು.
ಕಾರ್ಖಾನೆ ಮುಂದುವರಿಸುವ ಕುರಿತಂತೆ ಅಸಹಾಯಕತೆ ತೋರ್ಪಡಿಸಿದ ಬಿಎಸ್ ವೈ. ನಾವು, ಸಂಸದರು ಬಹಳ ಪ್ರಯತ್ನ ಮಾಡಿದ್ವಿ. ಇಡೀ ದೇಶದಲ್ಲಿ ಕೈಗೊಂಡ ನಿರ್ಧಾರವಿದು. ವಿಐಎಸ್ಎಲ್ ಒಂದೇ ಮುಚ್ಚುತ್ತಿಲ್ಲ. ನಷ್ಟದಲ್ಲಿರುವ ಹಲವು ಕಾರ್ಖಾನೆ ಮುಚ್ಚುತ್ತಿದ್ದಾರೆ. ಅದರಲ್ಲಿ ಭದ್ರಾವತಿಯ ವಿಐಎಸ್ಎಲ್ ಕೂಡ ಒಂದು ಎಂದು ಹೇಳಿದರು.
ನಾಳೆ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆ.ಪಿ. ನಡ್ಡಾ ಕಾರ್ಯಕ್ರಮ ವಿಚಾರದ ಬಗ್ಗೆ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲಿ ಎಲ್ಲ ನಾಯಕರೂ ಬರ್ತಾರೆ. ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಮೋದಿಯವರಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ಮಾತು ಕೊಟ್ಟಿದ್ದೇವೆ. ಕಾರ್ಯಕಾರಿಣಿಯಲ್ಲಿ ನೀಡಿದ ಮಾರ್ಗದರ್ಶನದಂತೆ ನಾವು ಕೆಲಸ ಮಾಡ್ತೇವೆ ಎಂದರು.