Site icon TUNGATARANGA

ಇನ್ನುಮುಂದೆ ಅಗ್ನಿಶಾಮಕದಳದ ನಿರ್ಲಕ್ಷ್ಯವನ್ನು ಸಹಿಸಲ್ಲ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಅಗ್ನಿಶಾಮಕದಳದ ನಿರ್ಲಕ್ಷ್ಯವನ್ನು ಇನ್ನುಮುಂದೆ ಸಹಿಸಲ್ಲ. ಮೊನ್ನೆ ನಡೆದ ಅಗ್ನಿ ಅವಘಡದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಶರತ್ ಭೂಪಾಳಂ ಸಾವು ಕಂಡಿದ್ದು, ಅವರ ಕುಟುಂಬದವರು ಅಗ್ನಿ ಶಾಮಕದಳದ ನಿರ್ಲಕ್ಷವೇ ಕಾರಣವೆಂದು ಆರೋಪಿಸಿ ಅದಕ್ಕೆ ಪೂರಕ ದಾಖಲೆಗಳನ್ನು ನೀಡಿದ್ದಾರೆ. ಹಾಗಾಗಿ ಇಂತಹ ಘಟನೆಗಳು ಸಂಭವಿಸಿದಾಗ

ಇಲಾಖೆ ಸಂಪೂರ್ಣ ಸಜ್ಜಾಗಿರಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪನವರು ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

 ಇಂದು ಅಗ್ನಿಶಾಮಕದಳದ ಕಚೇರಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಮತ್ತು ಅಗ್ನಿಶಾಮಕ ವಾಹನಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಶರತ್ ಭೂಪಾಳಂ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅಲ್ಲಿ ಹಾಜರಾದ ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಸಿ ಅವರಿಂದ ಸಂಪೂರ್ಣ ಮಾಹಿತಿ ಪಡೆದರು.

ಹಾಗೂ ವೈಫಲ್ಯ ಮುಚ್ಚಿ ಹಾಕಲು ನಾನು ಬಿಡುವುದಿಲ್ಲ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವುದು ನಿಶ್ಚಿತ. ಯಾವುದೇ ಕಾರಣಕ್ಕೂ ಸತ್ಯವನ್ನು ಮುಚ್ಚಿಡಬೇಡಿ. ಇನ್ನು ಮುಂದೆ ಈ ರೀತಿಯ ಘಟನೆಗಳಿಗೆ ಆಸ್ಪದವಿಲ್ಲ ಎಂದರು. 

 ಘಟನೆ ಸಂಭವಿಸಿದಾಗ ಅಗ್ನಿಶಾಮಕದಳದ ವಾಹನ ಬರಲು ತಡವಾಗಿದೆ. ಬ್ಯಾಟರಿ ಇರಲಿಲ್ಲ, ಬ್ಯಾಟರಿ, ಮಾಸ್ಕ್, ಉದ್ದವಾದ ಪೈಪ್, ಲೈಫ್ ಜಾಕೇಟ್, ಯಾವುದು ಕೂಡ ಮೊದಲ ವಾಹನದಲ್ಲಿ ಇರಲಿಲ್ಲ. ಎರಡನೇ ವಾಹನದಲ್ಲಿ ಎಲ್ಲವೂ ಇತ್ತು. ಸರಿಯಾಗಿ ಮಾಹಿತಿ ಇರುವ ಮತ್ತು ಲೀಡ್ ಮಾಡುವ ಸಿಬ್ಬಂದಿ ಕೂಡ ಇರಲಿಲ್ಲ ಎಂಬುದು ಸಂತ್ರಸ್ತರ ಆರೋಪವಿದೆ. ನೀವು ಈಗ ನಿಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಬೇಡಿ ಎಂದ ಅವರು, ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ನಿಜಾಂಶ ತಿಳಿದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 

 ಜಿಲ್ಲಾಧಿಕಾರಿಗಳು ಮಾತನಾಡಿ, ಹೆಚ್ಚುವರಿ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಕೋನಗಳಿಂದಲೂ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು 10 ದಿನಗಳ ಒಳಗೆ ವರದಿ ಸಲ್ಲಿಸುತ್ತೇವೆ. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದರು. 

 ಈ ಸಂದರ್ಭದಲ್ಲಿ ಅಗ್ನಿಶಾಮಕದಳದ ಅಧಿಕಾರಿ ಅಶೋಕ್, ಸೂಡಾ ಅಧ್ಯಕ್ಷ ಎನ್.ಜೆ.ನಾಗರಾಜ್, ಪಾಲಿಕೆ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಚನ್ನಬಸಪ್ಪ, ಕೆ.ಈ.ಕಾಂತೇಶ್, ಅಣ್ಣಪ್ಪ, ಮುರುಳಿ ಮೊದಲಾದವರಿದ್ದರು.

Exit mobile version