ಶಿವಮೊಗ್ಗ,ಜ.20:
ರಾಷ್ಟ್ರೀಯ ಶಿಕ್ಷಣ ಸಮಿತಿ ತನ್ನ ಅಮೃತ ಮಹೋತ್ಸವದ ನಿಮಿತ್ತ ಜವಾಹರ ಲಾಲ್ ನೆಹರು ನ್ಯೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿರ್ಮಿಸಿರುವ 400 ಕೆ ಡಬ್ಲ್ಯೂ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಜನವರಿ 25ರಂದು ಉದ್ಘಾಟನೆಯಾಗಲಿದ್ದು, ಇದರಿಂದ ಮಹಾವಿದ್ಯಾಲಯದ ವಿದ್ಯುತ್ ಶಕ್ತಿ ಖರ್ಚಿಗಾಗಿ ಬಳಕೆಯಾಗುತ್ತಿದ್ದ ಸುಮಾರು ವರ್ಷದ 50 ಲಕ್ಷ ರೂ ಹಣ ಉಳಿತಾಯವಾಗುತ್ತಿದೆ. ಕೇವಲ 10 ಲಕ್ಷದೊಳಗೆ ಈ ಖರ್ಚು ಮುಗಿಯುತ್ತಿದೆ ಎಂದು ಎನ್ ಇ ಎಸ್ ಕಾರ್ಯದರ್ಶಿ ಎಸ್. ಎನ್. ನಾಗರಾಜ್ ಇಂದಿಲ್ಲಿ ತಿಳಿಸಿದರು.
ಕರೋನಾ ಹಿನ್ನೆಲೆಯಲ್ಲಿ ಅಧಿಕೃತವಾಗಿ ಈ ಸೌರ ವಿದ್ಯುತ್ ಘಟಕವನ್ನು ಉದ್ಘಾಟಿಸಲು ಆಗಿರಲಿಲ್ಲ. ಜ.25ರಂಸು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ಇದನ್ನು ಉದ್ಘಾಟಿಸಿದ್ದಾರೆ. ಇದರ ಬಳಕೆಯಿಂದ ತಾಂತ್ರಿಕ ವಿದ್ಯಾಲಯದ ವಿದ್ಯುತ್ ಖರ್ಚು ಸಮಿತಿಗೆ ಉಳಿತಾಯವಾಗುತ್ತಿದೆ ಎಂದು ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸ್ಥಾಪಿಸಿದ ಈ ಘಟಕ 400 ಕೆ ಡಬ್ಲ್ಯೂ ಸಾಮರ್ಥ್ಯವನ್ನು ಹೊಂದಿದ್ದು ದೇಶಿಯ ಕಂಪನಿಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ಇದನ್ನು ಟಾಟಾ ಪವರ್ ಸೋಲಾರ್ ಅವರಿಗೆ ನೀಡಲಾಗಿತ್ತು. ಗ್ರಿಡ್ ಸಂಪರ್ಕ ಹೊಂದಿರುವ ಘಟಕ 25 ವರ್ಷಗಳ ಕಾಲ ಬಾಳಿಕೆಯಾಗಲಿದ್ದು, ವಾರ್ಷಿಕ ವಿದ್ಯುತ್ ಉತ್ಪಾದನೆ 520 ಯೂನಿಟ್ ಗಳಾಗಿದೆ ನಾವು ಹೂಡಿರುವ ಬಂಡವಾಳ ಕೇವಲ ಐದು ವರ್ಷದಲ್ಲಿ ನಮಗೆ ದೊರಕುವ ವಿದ್ಯುತ್ ರೂಪದ ವೆಚ್ಚದಲ್ಲಿ ಸಿಗುತ್ತಿದೆ ಎಂದರು.
ಡಿಸೆಂಬರ್ 2022 ರಿಂದ ಈವರೆಗೆ 15,03, 700 ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು, ಆರ್ಥಿಕವಾಗಿ ಈಗಾಗಲೇ 1,24,58,000 ರೂ ಲಾಭವಾಗಿದೆ. ನಮ್ಮ ಜೆಎನ್ಎನ್ ಸಿ ಇ ಒಂದು ಮಾದರಿ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಸೌರ ವಿದ್ಯುತ್ ಘಟಕವನ್ನು ಅಳವಡಿಸಿಕೊಂಡಿದೆ ಇದು ಶಿಕ್ಷಣ ಸಂಸ್ಥೆಯ ವಿದ್ಯುತ್ ಬೇಡಿಕೆ ಪೂರೈಸುವಲ್ಲಿ ಬಹು ಉಪಯುಕ್ತ ಹಾಗೂ ಆರ್ಥಿಕವಾಗಿ ಲಾಭದಾಯಕವಾದ ವ್ಯವಸ್ಥೆಯಾಗಿದೆ ಉಳಿದ ನಮ್ಮ ಸಂಸ್ಥೆಯ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಇಂತಹ ಘಟಕಗಳನ್ನು ಆರಂಭಿಸುವ ಚಿಂತನೆ ಇದೆ ಎಂದು ಕಾರ್ಯದರ್ಶಿ ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಸಿ. ಆರ್. ನಾಗರಾಜ್, ಸಹಕಾರದರ್ಶಿ ಡಾ. ಪಿ ನಾರಾಯಣ, ಖಜಾಂಚಿ ಡಿ.ವಿ. ರಮೇಶ್ ಹಿರಿಯ ನಿರ್ದೇಶಕರಾದ ಟಿ ಆರ್ ಅಶ್ವಥ್ ನಾರಾಯಣ ಶ್ರೇಷ್ಟಿ, ಸಹಾಯಕ ಕುಲಸಚಿವರಾದ ಹರಿಯಪ್ಪ ಪ್ರಾಂಶುಪಾಲರುಗಳಾದ ಡಾ. ಕೆ ನಾಗೇಂದ್ರ ಪ್ರಸಾದ್, ಡಾ. ಎಚ್ಎಸ್ ನಾಗಭೂಷಣ್, ಡಾ.ಕೆ ಅರವಿಂದ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿಎಂ ನೃಪತುಂಗ ಹಾಗೂ ಇತರರು ಉಪಸ್ಥಿತರಿದ್ದರು.