ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಸ್ಥಾಪನೆ ಸೇರಿದಂತೆ ಅಂತರರಾಜ್ಯ ಸಂಸ್ಥೆ ಕ್ಯಾಂಪ್ಕೋ, ಸಾಗರದ ಆಪ್ಸ್‌ಕೋಸ್‌ನಂತಹ ಸಂಸ್ಥೆಗಳನ್ನು ಹುಟ್ಟು ಹಾಕುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸಿದ್ದ ಮಾಜಿ ಶಾಸಕ, ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ(94) ವಯೋಸಹಜ ಕಾರಣಗಳಿಂದ ಮಂಗಳವಾರ (ಜ.17) ಬೆಳಿಗ್ಗೆ ನಿಧನ ಹೊಂದಿದರು.
ಒಟ್ಟು ಕುಟುಂಬ ಜೀವನದ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಹೆಗಡೆಯವರು ತಮ್ಮ ಜೊತೆಗಿದ್ದ ಸಹೋದರ ಗಣಪತಿ ಹೆಗಡೆ, ಪತ್ನಿ ಸಾವಿತ್ರಮ್ಮ, ಪುತ್ರರಾದ ತಿಮ್ಮಪ್ಪ ಹಾಗೂ ಅಶೋಕ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
ಸಾಗರದ ಆಪ್ಸ್‌ಕೋಸ್, ತೋಟಗಾರ್ಸ್, ಅಡಿಕೆ ಬೆಳೆಗಾರರ ಸಂಘಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಹೆಗಡೆಯವರು ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 1978, 83 ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಹಟ್ಟಿಯಂಗಡಿಯ ಸಿದ್ಧಿವಿನಾಯಕ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಹಾಗೂ ಸಿದ್ಧಿ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ಹಟ್ಟಿಯಂಗಡಿ ಗಣಪತಿ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪಾತ್ರ ವಹಿಸಿದ್ದರು.
ಸಂತಾಪ: ಕೇವಲ ರಾಜಕೀಯ ಕ್ಷೇತ್ರಕ್ಕೆ ಅಂಟಿಕೊಳ್ಳದೆ ಸಹಕಾರಿ ಕ್ಷೇತ್ರ ವಿದ್ಯಾ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಹಾಗೂ ಬ್ರಾಹ್ಮಣ ಸಮುದಾಯ ನಡುವೆ ಕೂಡ ತಮ್ಮನ್ನು ತಾವು ಗುರುತಿಸಿಕೊಂಡು ಹಮ್ಮು ಬಿಮ್ಮಿಲ್ಲದೆ ಎಲ್ಲರೂಡನೆ ಒಂದಾಗಿ ಬೆರೆಯುತ್ತಿದ್ದರು. ಅವರ ಸರಣ ನಡವಳಿಕೆ ಸ್ನೇಹಶೀಲ ಸ್ವಭಾವ ನಿಜಕ್ಕೂ ನಮ್ಮೆಲ್ಲರಿಗೂ ಮಾದರಿ.94 ವರ್ಷದ ತಿಮ್ಮಪ್ಪನವರು ವಯೋ ಸಹಜವಾದ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.
ಶತಿಮ್ಮಪ್ಪ ಹೆಗಡೆಯವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ದತ್ತಾತ್ರಿ ಎಸ್., ಉಪಾಧ್ಯಕ್ಷರು , ವಿಶ್ವ ವಿಪತ್ರಯೀ ಪರಿಷತ್ . ಕರ್ನಾಟಕ.
ಹೊಸನಗರದ ರಾಮಚಂದ್ರಾಪುರ ಮಠದ ಚಟುವಟಿಕೆಯಲ್ಲಿ ಮುಂಚೂಣಿಯ ನಾಯಕತ್ವ ವಹಿಸಿದ್ದರು. ಸಾಗರದ ಶಿಕ್ಷಣ ಸಂಸ್ಥೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್‌ಬಿ ಕಾಲೇಜು, ಪ್ರಗತಿ ಸಂಯುಕ್ತ ಶಾಲೆ ಮೊದಲಾದವುಗಳ ಸ್ಥಾಪನೆಯಲ್ಲಿ ಭಾಗವಹಿಸಿ ಸಂಸ್ಥೆಯ ಉಪಾಧ್ಯಕ್ಷ ಹುದ್ದೆಯನ್ನು ಬಹುಕಾಲ ನಿರ್ವಹಿಸಿದರು. ಕೇಂದ್ರ ಸಾಂಬಾರು ಮಂಡಳಿಯ ನಿರ್ದೇಶಕರಾಗಿ, ಭೂ ನ್ಯಾಯ ಮಂಡಳಿ, ಲ್ಯಾಂಡ್ ಗ್ರಾಂಟ್ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.