ಶಿವಮೊಗ್ಗ, ಜ.16:
ರಾಜ್ಯದ ಪಿ ಡಬ್ಲ್ಯೂ ಡಿ ಗುತ್ತಿಗೆದಾರರ ಕಾಮಗಾರಿಗಳ ಸುಮಾರು 25 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದ್ದು, ಈ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಸಂಘ ಜನವರಿ 18ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರತಿಭಟನೆಗೆ ಶಿವಮೊಗ್ಗ ಜಿಲ್ಲೆಯಿಂದ ನೂರಾರು ಸಂಖ್ಯೆಯ ಗುತ್ತಿಗೆದಾರರು ಭಾಗವಹಿಸಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪಿಡಬ್ಲ್ಯೂಡಿ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಧನಶೇಖರ್ ತಿಳಿಸಿದರು.
ಅವರಿಂದು ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಕಾಮಗಾರಿ ಬಿಲ್ ಪಾವತಿ ಮಾಡಬೇಕು. ಕೆ ಟಿ ಟಿ ಪಿ ಕಾಯ್ದೆಯಲ್ಲಿ ಇಲ್ಲದೆ ಇರುವ ನಿಯಮ ಬಾಹಿರ ಸೈನ್ಡ್ ಬೈ ಸಬ್ ಡಿವಿಷನ್ ಎಇಇ ಪದ್ದತಿಯನ್ನು ರದ್ದುಪಡಿಸಬೇಕು. ಟೆಂಡರ್ ಸಲ್ಲಿಸುವಾಗ ಬ್ಯಾಂಕ್ ಗ್ಯಾರಂಟಿಯನ್ನು ಒಪ್ಪಂದದ ಸಮಯದಲ್ಲಿ ಪಡೆಯಬೇಕು. ನಿಯಮದ ಪ್ರಕಾರ 20 ಲಕ್ಷ ಕಾಮಗಾರಿಗೆ ಅರ್ಹತಾ ಪ್ರಮಾಣ ಪತ್ರ ಅಗತ್ಯವಿಲ್ಲ. ಅದೇ ರೀತಿ 50 ಲಕ್ಷ ಕಾಮಗಾರಿಗಳನ್ನು ಏಕಗವಾಕ್ಷಿ ಪದ್ಧತಿಯಲ್ಲಿ ಟೆಂಡರ್ ಕರೆಯಬೇಕು ಎಂದು ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.
ಒಂದು ಕೋಟಿಗೆ ಮೀರದಂತಹ ಪ್ಯಾಕೇಜಿಂಗ್ ಕಾಮಗಾರಿಗಳನ್ನು ತಾಲ್ಲೂಕ್ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕೆಂಬ ನಿಯಮವಿದ್ದರೂ, ಸಹ ಕೆಲವು ಅಧಿಕಾರಿಗಳು ಇದನ್ನು ಉಲ್ಲಂಘಿಸುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. 18-7-2-2022ರ ಪ್ರಕಾರ ಜಿಎಸ್ಟಿ ಅನ್ನು ಗುತ್ತಿಗೆದಾರರಿಗೆ ಕೊಡಬೇಕು. ಎಂಡಿಪಿ ಸಲ್ಲಿಸದೆ ಇರುವ ಗುತ್ತಿಗೆದಾರರಿಗೆ ರಾಜಧನದ ಐದು ಪಟ್ಟು ದಂಡ ಮತ್ತು ಶೇಕಡ 30ರಷ್ಟು ಡಿಎಂಎಫ್ ನಿಧಿಯನ್ನು ಗುತ್ತಿಗೆದಾರರು ನೀಡಬೇಕೆಂಬ ಷರತ್ತನ್ನು ರದ್ದುಪಡಿಸಬೇಕು ಎಂದರು
ಕಾಮಗಾರಿಗಳ ಯಂತ್ರೋಪಕರಣಗಳ ಸಾಮರ್ಥ್ಯಕ್ಕೆ ಕೆ ಟಿ ಟಿ ಪಿ ಕಾಯಿದೆ ಅಡಿ 3 ಕೋಟಿವರೆಗೆ ವಿನಾಯಿತಿ ನೀಡಿದ್ದರೂ, ಅಧಿಕಾರಿಗಳು ಕೊಡುತ್ತಿಲ್ಲ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಅಂದಿನ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ನೂರಾರು ಗುತ್ತಿಗೆದಾರರು ಸ್ವಂತ ಖರ್ಚಿನಿಂದ ಭಾಗವಹಿಸಲಿದ್ದಾರೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಂದೆ ಉಗ್ರವಾದ ಹೋರಾಟ ನಡೆಸಲಾಗುತ್ತದೆ ಎಂದು ಧನ ಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಎನ್. ಮಂಜುನಾಥ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಮಂಜುನಾಥ್, ಖಜಾಂಚಿ ಹೆಚ್. ಬಿ. ಜಯಪ್ಪ ಸಹಕಾರ್ಯದರ್ಶಿ ಸೈಯದ್ ನಫೀಜ್, ಪ್ರಮುಖರಾದ ಮಧು, ಎಮ್. ಆರ್. ಬಸವರಾಜ್, ವೆಂಕಟೇಶ್ ಪ್ರಕಾಶ್ ಹಾಗೂ ಇತರರು ಉಪಸ್ಥಿತರಿದ್ದರು.