ಶಿವಮೊಗ್ಗ: ಸಿದ್ದರಾಮಯ್ಯ ಎರಡಲ್ಲ, ರಾಜ್ಯದ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧಿಸುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರದೇ ಪಕ್ಷದವರು ಸೋಲಿಸಲು ಕಾಯುತ್ತಿದ್ದಾರೆ. ಹಾಗಾಗಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಈ ಬಾರಿ ಗೆದ್ದು ಬರುವುದಿಲ್ಲ ಎಂದರು.
ಅವರದೇ ಪಕ್ಷದ ಡಾ.ಪರಮೇಶ್ವರ್ ಅವರ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣ. ಇನ್ನು ಮಲ್ಲಿಕಾರ್ಜುನ ಖರ್ಗೆ ಸೋಲುವಂತೆ ನೋಡಿಕೊಂಡಿದ್ದಾರೆ. ಇನ್ನೂ ಕೆಲವರ ಸೋಲಿನಲ್ಲೂ ಇವರ ಪಾತ್ರ ಇದೆ. ಅದೇ ಕಾರಣಕ್ಕೆ ಬಾದಾಮಿ ಕ್ಷೇತ್ರವನ್ನು ಬಿಟ್ಟು ಹೊರಟಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ಮುನಿಯಪ್ಪ ಅವರ ಕಡೆಯವರು ಮರೆತಿಲ್ಲ. ಅಲ್ಲಿಯೇ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ಜಟಾಪಟಿ ಇದೆ. ಹಾಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲ ಎಂದರು.
ಸಿದ್ಧರಾಮಯ್ಯ ಅವರಿಗೆ ಸ್ವತಃ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದೇ ಗೊತ್ತಿಲ್ಲ. ಅವರ ಕ್ಷೇತ್ರ ಯಾವುದು ಎಂಬುದು ಪ್ರಶ್ನೆಯಾಗಿದೆ. ಬಾದಾಮಿಯಿಂದ ಸ್ಪರ್ಧಿಸಿದರೆ ಈ ಬಾರಿ ಜನರು ಕೈಕೊಡುತ್ತಾರೆ ಎಂಬುದು ಗೊತ್ತಿದೆ. ಅದಕ್ಕೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎಂದರು. ಇದೀಗ ಇದ್ದಕ್ಕಿದ್ದಂತೆ ದೇವರು ಪ್ರತ್ಯಕ್ಷವಾಗಿ ಎರಡು ಕಡೆ ಸ್ಪರ್ಧಿಸುವಂತೆ ಹೇಳಿದೆ. ನಾನು ದೇವರನ್ನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ದೇವರನ್ನು ನನ್ನಷ್ಟು ನಂಬುವವರು ಮತ್ತೊಬ್ಬರಿಲ್ಲ. ಆದರೆ, ಒಂದಂತೂ ಸ್ಪಷ್ಟ. ಈ ಬಾರಿ ಸಿದ್ಧರಾಮಯ್ಯ ಎರಡು ಕಡೆಯಲ್ಲ, 25 ಕಡೆಯಿಂದ ಸ್ಪರ್ಧಿಸಿದರೂ ಸೋಲುವುದು ಖಚಿತ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಇದೇ ಸಿದ್ಧರಾಮಯ್ಯ ತಮ್ಮದೇ ಪಕ್ಷದ ಜಿ. ಪರಮೇಶ್ವರ್, ಮುನಿಯಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸಿರಲಿಲ್ಲವೇ? ಇವರೆಲ್ಲರೂ ಸಿದ್ಧರಾಮಯ್ಯಗೆ ಉತ್ತರ ಕೊಡಲು ಕಾಯುತ್ತಿದ್ದಾರೆ. ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ಈ ನಾಲ್ವರೇ ಸಿದ್ಧರಾಮಯ್ಯರನ್ನು ಸೋಲಿಸುತ್ತಾರೆ ಎಂದರು.
ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿವೆ. ಹೀಗಾಗಿ ಅತಿ ಹೆಚ್ಚು ಮತ ಬಿಜೆಪಿಗೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದರು.
ಸಿದ್ಧರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ, ಮಂತ್ರಿ ಸ್ಥಾನ ಕಳೆದುಕೊಂಡ ನಂತರ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರು. ಅದಾದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಇವರೆಲ್ಲ ಸ್ಥಾನ ಅಧಿಕಾರ ಅನುಭವಿಸುತ್ತಿದ್ದಾರಲ್ಲ ಎಂಬ ನೋವು ಸಿದ್ಧರಾಮಯ್ಯರಿಗೆ ಕಾಡತೊಡಗಿದೆ. ಇಷ್ಟು ದಿನ ನಮ್ಮದು ಜಹಗೀರದಾರ್. ನಾವೇ ಅಧಿಕಾರ ನಡೆಸುವವರು ಎಂದುಕೊಂಡಿದ್ದರು. ಆದರೆ, ಇದೀಗ ಎಲ್ಲೆಡೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಇದನ್ನು ತಡೆದುಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಛೇಡಿಸಿದರು.
ಕಾಂಗ್ರೆಸ್ ನವರಿಗೆ ಅಧಿಕಾರದ ದಾಹ ಇದೆ. ಆದರೆ, ದೇಶ ಹಾಗೂ ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಸಂಫೂರ್ಣ ತಿರಸ್ಕಾರ ಮಾಡಿದ್ದಾರೆ. ಹೀಗಿದ್ದರೂ ಕೂಡ ಮತ್ತೆ ಅಧಿಕಾರ ಹಿಡಿಯಬೇಕೆಂದು ನಾನಾ ರೀತಿಯ ಆಟ, ಕಸರತ್ತು ನಡೆಸುತ್ತಿದ್ದಾರೆ. ಆದರೆ, ಅವರ ಆಟ ಎಲ್ಲಿಯೂ ನಡೆಯುವುದಿಲ್ಲ. ಜನರೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಿದ್ಧರಾಮಯ್ಯ ತಾವೇ ಕುರುಬರ ನಾಯಕ ಎಂದುಕೊಂಡಿದ್ದಾರೆ. ಆದರೆ, ಕುರುಬ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯಾದರೂ ಏನು? ಕುರುಬ ಸಮಾಜದ ಇನ್ನೋರ್ವ ನಾಯಕನಾಗಿದ್ದ ವರ್ತೂರು ಪ್ರಕಾಶ್ ರಾಜಕೀಯದಲ್ಲಿ ಮೇಲೆ ಬರಬಾರದು ಎಂದು ಇದೇ ಸಿದ್ಧರಾಮಯ್ಯ ಅಡ್ಡಿಯಾಗಿದ್ದರು. ವರ್ತೂರು ಪ್ರಕಾಶ್ ಅವರನ್ನು ರಾಜಕೀಯವಾಗಿ ತುಳಿದರು. ಇದು ಕೂಡ ಮುಂದಿನ ಚುನಾವಣೆಯಲ್ಲಿ ಗಣನೆಗೆ ಬರಲಿದೆ. ಅಲ್ಲದೇ, ಒಕ್ಕಲಿಗರು ಕೂಡ ಸಿದ್ಧರಾಮ್ಮಯಗೆ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ನವರ ಜನಧ್ವನಿ ರಥಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕಾಂಗ್ರೆಸ್ ನವರು ಯಾತ್ರೆ ಎಂಬ ಪದ ಕಲಿತಿದ್ದೇ ಬಿಜೆಪಿಯಿಂದ. ಕಾಂಗ್ರೆಸ್ ನವರಿಗೆ ಯಾತ್ರೆ ಪಾತ್ರೆ ಎಂಬುದು ಗೊತ್ತೇ ಇರಲಿಲ್ಲ. ಈಗ ಬಿಜೆಪಿಯವರನ್ನು ನೋಡಿಕೊಂಡು ನಾನಾ ರೀತಿಯ ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ಮೂಲಕವಾದರೂ ಕಾಂಗ್ರೆಸ್ ನವರು ಒಟ್ಟಿಗೆ ಸೇರುತ್ತಾರೆಯೇ? ನಿಜಕ್ಕೂ ಸೇರುವುದಿಲ್ಲ. ಅಲ್ಲೂ ಕೂಡ ಸಾಕಷ್ಟು ಗುಂಪುಗಳಿವೆ. ಇದು ಕಾಂಗ್ರೆಸ್ ನ ಸದ್ಯದ ಪರಿಸ್ಥಿತಿ ಎಂದು ಛೇಡಿಸಿದರು
ಮೀಸಲಾತಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅದನ್ನು ಬಿಟ್ಟು ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಸಿದರೆ ಮೀಸಲಾತಿ ದೊರಕುತ್ತದೆ ಎಂದು ಯಾರಾದರೂ ಅಂದುಕೊಂಡರೆ ಹೋರಾಟ ನಡೆಸಿಕೊಳ್ಳಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಹೋರಾಟದಿಂದ ಮೀಸಲಾತಿ ದೊರಕುವುದಾದರೆ ಎಲ್ಲಾ ಸಮಾಜದವರೂ ಹೋರಾಟ ನಡೆಸುತ್ತಾರೆ. ಮೀಸಲಾತಿ ಬೇಕು ಎನ್ನುತ್ತಾರೆ. ನ್ಯಾಯಾಲಯ ನೀಡಿದ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು.
ಸ್ಯಾಂಟ್ರೋ ರವಿ ಮಾಡಿದ ಮುಠ್ಠಾಳ ಕೆಲಸಗಳಿಗೆ ಯಾವುದೇ ಶಿಕ್ಷೆ ನೀಡಿದರೂ ಕಡಿಮೆಯೇ. ತನಿಖೆಯಿಂದ ಆತನ ಜೊತೆ ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿ ಯಾರೇ ಇದ್ದರೂ ಹೊರ ಬರುತ್ತೆ. ಹೆಣ್ಣು ಮಕ್ಕಳ ಮಾರಾಟದ ದಂಧೆ ಮಾಡುತ್ತಿದ್ದ ದುಷ್ಟ ಹಾಗೂ ನೀಚನನ್ನ ನಮ್ಮ ರಾಜ್ಯದಲ್ಲಿ ಹಿಂದೆಂದೂ ನೋಡಿರಲಿಲ್ಲ. ಇಡೀ ಕರ್ನಾಟಕ ರಾಜ್ಯದ ಜನರ ಅಪೇಕ್ಷೆ ಇದೆ. ಆತನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಈಶ್ವರಪ್ಪ ಹೇಳಿದರು.