ಶಿವಮೊಗ್ಗ: ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇಂದಿನ ಯುವ ಪೀಳಿಗೆ ಜಾಗೃತರಾಗಬೇಕಿದೆ. ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಿದೆ. ನೈತಿಕತೆ ಅಧಃಪತನಕ್ಕೆ ಹೋಗದಂತೆ ನೋಡಿಕೊಳ್ಳಬೇಕಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.
ಶನಿವಾರ ಡಿವಿಎಸ್ (ದೇಶೀಯ ವಿದ್ಯಾಶಾಲಾ ಸಮಿತಿ) ಅಮೃತ ಮಹೋತ್ಸವದ ಸಮಾರೋಪ ಉದ್ಘಾಟಿಸಿ ಮಾತನಾಡಿ, ಇದು ಸಾಧ್ಯವಾಗಬೇಕಾದರೆ ಮೌಲ್ಯಾಧಾರಿತ ಶಿಕ್ಷಣದ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದರು.
ಪ್ರತಿಯೊಬ್ಬರೂ ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಕಂಡುಕೊಳ್ಳಬೇಕು. ಪ್ರತಿನಿತ್ಯ ಮಾಡುವ ಕೆಲಸ ತೃಪ್ತಿದಾಯಕವಾಗಿದ್ದರೆ ಅದಕ್ಕಿಂತ ದೊಡ್ಡದು, ಸುಖಕರವಾದದ್ದು ಬೇರೊಂದಿಲ್ಲ. ಮನೆ, ಆಸ್ತಿ ಮಾಡುವುದರಿಂದ ಸಿಗುವ ಸಂತೋಷ ಶಾಶ್ವತವಲ್ಲ, ನಾವು ವೃತ್ತಿಯನ್ನು ಮನಃಪೂರ್ವಕವಾಗಿ ಅಪ್ಪಿಕೊಳ್ಳಬೇಕು. ಅದರಿಂದ ಸಿಗುವ ಸಂತೋಷ ಬೇರೆ ಯಾವುದಕ್ಕೂ ಸಮವಲ್ಲ ಎಂದರು.
ಹಲವು ಬಾರಿ ವಿಚಾರಗಳು ಸರಿಯಾಗಿ ಇರದಿದ್ದರೆ ಕೃತಿಗಳು ಕೂಡ ಸರಿಯಾಗಿರಲ್ಲ. ಆ ನಿಟ್ಟಿನಲ್ಲಿ ನಮ್ಮ ವಿಚಾರಗಳನ್ನು ವಿಮರ್ಶೆ ಮಾಡಿ ಕೊಳ್ಳಬೇಕಿದೆ. ಆಲೋಚನೆಗಳ ಕುರಿತು ನಿಗಾ ವಹಿಸಬೇಕಾಗುತ್ತದೆ. ವಿಚಾರ ಗಳು ಗೌರವದಿಂದ ಕೂಡಿರಬೇಕು. ವಿದ್ಯಾರ್ಥಿಗಳು ಸತತ ಮನನ ಮಾಡಿ ಕೊಂಡರೆ, ಶಿಕ್ಷಕರು ಅಧ್ಯಯನಶೀಲರಾಗಬೇಕಿದೆ. ಇದರಿಂದ ಸಮಾಜದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿದೆ ಎಂದು ಹೇಳಿದರು.
ದೇವರು ಪ್ರತಿಯೊಬ್ಬರಿಗೂ ಒಂದೊಂದು ಅವಕಾಶಗಳನ್ನು ನೀಡಿದ್ದಾನೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಸಕಾಲಕ್ಕೆ ಮುಟ್ಟಿಸಬೇಕು. ಕರ್ತವ್ಯಲೋಪ ಅಥವಾ ಭ್ರಷ್ಟಾಚಾರ ನಡೆದರೆ ಅಲ್ಲಿ ಲೋಕಾಯುಕ್ತ ದಾಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಬಿ.ಎಸ್.ಪಾಟೀಲ್-ಶೋಭಾ ಪಾಟೀಲ್ ದಂಪತಿ ಸನ್ಮಾನಿಸ ಲಾಯಿತು. ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕರಾದ ಎಂ.ರಾಜು, ಡಾ. ಎಚ್. ಮಂಜುನಾಥ, ಜಿ.ಮಧುಸೂದನ್, ಎನ್.ಆರ್.ಐತಿನ್, ಎಚ್.ಸಿ.ಉಮೇಶ್, ಡಾ. ಎಂ.ವೆಂಕಟೇಶ್, ಪ್ರಮುಖರಾದ ಪದ್ದೇಗೌಡ, ಎ.ರಾಜಶೇಖರ್, ಸಿ.ಕೆ. ಶ್ರೀಧರ್, ಪಿ.ಲಕ್ಷ್ಮಣ್, ಬಸವರಾಜ್, ಲಕ್ಷ್ಮೀದೇವಿ, ಪೂರ್ಣಿಮಾ ಇದ್ದರು.