Site icon TUNGATARANGA

ಅದ್ದೂರಿಯಾಗಿ ನಡೆದ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ

 ಸೀತಾ ಕಲ್ಯಾಣೋತ್ಸವ ಅಂಗವಾಗಿ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ನದಿಯಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನಡೆಯಿತು. 

ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮೂರ್ತಿಗಳನ್ನು ತೆಪ್ಪದಲ್ಲಿ ಇರಿಸಿ, ತುಂಗಾ ನದಿಯಲ್ಲಿ ಉತ್ಸವ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. 

ತೆಪ್ಪೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಘೋಷಣೆಗಳನ್ನು ಕೂಗಿದರು. ತೆಪ್ಪೋತ್ಸವದ ಸಂದರ್ಭ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಇದನ್ನು ಕಣ್ತುಂಬಿಕೊಂಡು ಜನರು ಖುಷಿ ಪಟ್ಟರು. ಇನ್ನು, ಹೊಳೆಯಲ್ಲಿ ದೀಪಗಳನ್ನು ತೇಲಿ ಬಿಡಲಾಯಿತು. ಇದು ತೆಪ್ಪೋತ್ಸವದ ಮೆರಗು ಹೆಚ್ಚಿಸಿದರು.

ಪಟಾಕಿ, ಸಿಡಿಮದ್ದುಗಳು ಮಕ್ಕಳಿಂದ ವಯಸ್ಕರವರೆಗೂ ರಂಜಿಸಿದರೆ, ಧ್ವನಿವರ್ಧಕದಲ್ಲಿ ಇಂಪಾದ – ಭಕ್ತಿಗೀತೆಗಳ ಝೇಂಕಾರ ಮನಸ್ಸು ತಂಪಾಗಿಸಿತು. ಕೊರೆಯುವ ಚಳಿಯಲ್ಲೂ ನೂರಾರು ಭಕ್ತರ ಮನದಲ್ಲಿ ಭಕ್ತಿಯ ಪುನೀತ ಭಾವ ಮೂಡಿತು.

ತುಂಗಾ ನದಿ ಸೇತುವೆಗಳು ಸೇರಿದಂತೆ ಕೋರ್ಪಲಯ್ಯನ ಛತ್ರದ ಬಳಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ಹೂ ಬೆಳಕನ್ನು ಹೊರಸೂಸುವ ಪಟಾಕಿ, ಸಿಡಿಮದ್ದುಗಳು, ಸುಶ್ರಾವ್ಯವಾದ ಮಂಗಳವಾದ್ಯ, ಭಕ್ತಿ ಸಂಗೀತ, ಭಜನೆ ಎಲ್ಲವುಗಳ ನಡುವೆ ಸರ್ವಾಲಂಕಾರ ಭೂಷಿತ ಕೋದಂಡರಾಮರ ಉತ್ಸವ ಬಿಂಬವನ್ನು ಭಕ್ತರು ಕಣ್ಣುಂಬಿಕೊಂಡರು.

Exit mobile version