Site icon TUNGATARANGA

ಪರಿಶಿಷ್ಟರ ಕಲ್ಯಾಣ ಯೋಜನೆಗಳಲ್ಲಿ ಅವ್ಯವಹಾರ: ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ ಆರೋಪ

ಶಿವಮೊಗ್ಗ: ಪರಿಶಿಷ್ಟರ ಕಲ್ಯಾಣ ಯೋಜನೆಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಹಾಗೆಯೇ, ಸರ್ಕಾರದ ಯೋಜನೆಗಳು ವಿಫಲವಾಗಿವೆ. ಮತ್ತು ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಗಂಗಾ ಕಲ್ಯಾಣ ಯೋಜನೆಯಡಿ 430 ಕೋಟಿ ರೂ. ಅವ್ಯವಹಾರ ನಡೆದಿದ್ದು, ಭೋವಿ ನಿಗಮದಲ್ಲಿ 130 ಕೋಟಿ ರೂ. ಅವ್ಯವಹಾರ ನಡೆದಿದೆ. ಹಾಗೆಯೇ ಬಂಜಾರ ನಿಗಮದಲ್ಲಿ ಮೀಸಲಿಟ್ಟಿದ್ದ 126 ಕೋಟಿ ರೂ. ಬಳಕೆಯೇ ಆಗಿಲ್ಲ ಎಂದರು.

ಬಜೆಟ್ ನಲ್ಲಿ ಶೇ. 24.1 ರಷ್ಟು ಅನುದಾನ ಮೀಸಲಾಗಿಡಬೇಕಿತ್ತು. ಅದರ ಪ್ರಕಾರ 42 ಸಾವಿರ ಕೋಟಿ ರೂ. ಆಗುತ್ತದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಇಟ್ಟಿರುವುದು ಕೇವಲ 28 ಕೋಟಿ ರೂ. ಮಾತ್ರ. ಆ ಹಣದಲ್ಲೂ ಕೂಡ 8 ಕೋಟಿ ರೂ. ಅಷ್ಟನ್ನು ಇತರ ಕೆಲಸಗಳಿಗೆ ಉಪಯೋಗಿಸಿದ್ದಾರೆ. ಹಾಗಾಗಿ, ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟರಿಗೆ ಯಾವ ನ್ಯಾಯವೂ ಸಿಕ್ಕಿಲ್ಲ ಎಂದರು.

ಜನವರಿ 8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟರಿಗಾದ ಅನ್ಯಾಯವನ್ನು ಈ ಸಮಾವೇಶದ ಮೂಲಕ ಜನರಿಗೆ ತಿಳಿಸಲಾಗುವುದು. ಸಮಾವೇಶಕ್ಕೆ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್, ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ, ಸೇರಿದಂತೆ ಎಲ್ಲಾ ಮುಖಂಡರು ಆಗಮಿಸಲಿದ್ದಾರೆ. ಹಾಗೆಯೇ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಕರೆತರುವ ಪ್ರಯತ್ನ ಕೂಡ ನಡೆದಿದೆ ಎಂದರು.

90 ಸಾವಿರ ಬ್ಯಾಕ್ ಲಾಗ್ ಹುದ್ದೆ ಖಾಲಿ ಇದ್ದರೂ ಇನ್ನೂ ಭರ್ತಿ ಮಾಡಿಲ್ಲ. ದೌರ್ಜನ್ಯ ನಡೆಯುತ್ತಿದ್ದರೂ, ಸರ್ಕಾರವಾಗಲಿ, ಪೊಲೀಸರಾಗಲೀ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮತ್ತು ಸಿದ್ಧರಾಮಯ್ಯ ಅವರು 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅವರ ಸ್ಪರ್ಧೆಯ ವಿಷಯ ಈ ಬಿಜೆಪಿಯವರಿಗೇಕೆ ಬೇಕು. ಸಿದ್ಧರಾಮಯ್ಯ ಅವರನ್ನು ಕಂಡರೆ ಬಿಜೆಪಿಗೆ ಭಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಸಿ. ಮಹದೇವಪ್ಪ, ಪಿ.ಟಿ. ಪರಮೇಶ್ವರ ನಾಯ್ಕ್, ಬೇಳೂರು ಗೋಪಾಲಕೃಷ್ಣ, ಹೆಚ್.ಎಸ್. ಸುಂದರೇಶ್, ಅನಿತಾ ಕುಮಾರಿ, ವೈ.ಹೆಚ್. ನಾಗರಾಜ್, ಶ್ರೀನಿವಾಸ ಕರಿಯಣ್ಣ ಇದ್ದರು.

Exit mobile version