ಬಸವಪ್ರಭು ಸ್ವಾಮೀಜಿಯೇ ಸಿದ್ಧರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲಿ, ಬೇಡ ಎಂದವರು ಯಾರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯದಿಂದ ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಯಾರೋ ಸ್ವಾಮೀಜಿ ಹೇಳಿದರೆ ಆಗಲ್ಲ. ರಾಜ್ಯದ ಜನರು ಅದನ್ನು ತೀರ್ಮಾನ ಮಾಡಬೇಕು ಎಂದರು.
ಸಿದ್ದರಾಮಯ್ಯ ಮತ್ತೇ ಸಿಎಂ ಆಗ್ಬೇಕು ಎಂದು ಬಸವಪ್ರಭು ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರು ಬೇಡ ಅಂತಾರೇ, ಅವರೇ ತೆಗೆದುಕೊಂಡು ಹೋಗಿ ಸಿಎಂ ಸ್ಥಾನದಲ್ಲಿ ಕೂರಿಸಲಿ. ಯಾರೋ ಒಬ್ಬರು ತೀರ್ಮಾನ ತೀರ್ಮಾನ ಮಾಡುವುದಕ್ಕೆ ಬರಲ್ಲ ಎಂದರು.
ರಾಜ್ಯದ ಜನ ಸರ್ಕಾರ ಏನ್ ಕೆಲಸ ಮಾಡಿದೆ. ಸಂಘಟನೆ ಏನಿದೆ ಎಲ್ಲವನ್ನೂ ಗಮನಿಸುತ್ತಾರೆ. ಇವರ ನಾಯಕತ್ವ ಇದ್ದಾಗ ಏನು ಅಭಿವೃದ್ಧಿಯಾಗಿದೆ ಎಲ್ಲವನ್ನೂ ನೋಡ್ತಾರೆ. ಬಿಜೆಪಿ-ಕೆಜೆಪಿ ಒಡೆಯದಿದ್ದರೆ ಈ ಜನ್ಮದಲ್ಲಿ ಸಿದ್ದರಾಮಯ್ಯ ಸಿಎಂ ಆಗ್ತಾಯಿರಲಿಲ್ಲ. ಯಡಿಯೂರಪ್ಪನವರ ಫೋಟೋ ಮನೆಯಲ್ಲಿಟ್ಟು ಸಿದ್ದರಾಮಯ್ಯ ಪೂಜೆ ಮಾಡಬೇಕು ಎಂದರು.
ಇನ್ನೂ ಬಿಜೆಪಿ ಒಡೆಯುವ ಪ್ರಶ್ನೆ ಇಲ್ಲ. ಏಕತೆಯಿಂದ ಇದ್ದೇವೆ. ಅಂದಿಗಿಂತ ಇಂದು ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬೆಳೆದಿದೆ. ಮೋದಿ ಅವರ ನಾಯಕತ್ವದ ಜೊತೆಗೆ ಅಭಿವೃದ್ಧಿ ಕೆಲಸ, ಸಂಘಟನೆ ಸಹ ಇದೆ. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ ಎನ್ನುವ ವಿಶ್ವಾಸ ನನಗಿದೆ. ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಯಾರೋ ಸ್ವಾಮೀಜಿ ಹೇಳಿದರೆ ಆಗಲ್ಲ. ರಾಜ್ಯದ ಜನರು ಅದನ್ನು ತೀರ್ಮಾನ ಮಾಡಬೇಕು. ಜನ ಬಿಜೆಪಿ ಪರವಾಗಿ ಇದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಅಮಿತ್ ಶಾ ಪ್ರವಾಸದ ಬಗ್ಗೆ ಡಿ.ಕೆ. ಶಿವಕುಮಾರ್ ಟೀಕೆ ವಿಚಾರದ ಬಗ್ಗೆ ಈಶ್ವರಪ್ಪ ಮಾತನಾಡಿ, ಅಮಿತ್ ಶಾ ಐದು ವರ್ಷನೂ ಇಲ್ಲಿ ಬಂದು ಆಳ್ವಿಕೆ ಮಾಡಕ್ಕೆ ಬರಲ್ಲ. ಒಂದು ಸರಿ ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಬಂದು ಹೋದರು. ಹಾಗಾದ್ರೆ ಭಾರತ ಜೋಡ್ಸಿ ಬಿಡ್ತಾ…? ಹಾಗಂತ ನಾನು ರಾಹುಲ್ ಗಾಂಧಿಗೆ ಟೀಕೆ ಮಾಡ್ಲಾ…?ರಾಹುಲ್ ಗಾಂಧಿಗೆ ದೇಶ ನೋಡುವ ಅವಕಾಶ ಸಿಕ್ತು. ಅದಕ್ಕಾಗಿ ನಾನು ಸಂತೋಷ ಪಡುತ್ತೇನೆ. ಅಮಿತ್ ಶಾ ದೆಹಲಿಯಲ್ಲೇ ಕುಳಿತು ಎಲ್ಲವನ್ನೂ ಗಮನಿಸ್ತಾ ಇದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಅಮಿತ್ ಶಾ ಎಷ್ಟು ಕ್ರಮವನ್ನು ಕೈಗೊಂಡರು. ಇದೇ ಸಿದ್ದರಾಮಯ್ಯ ಇದ್ದಂತಹ ಸಂದರ್ಭದಲ್ಲಿ ಏಕೆ ಮಾಡ್ಲಿಲ್ಲ…? ಡಿ.ಕೆ. ಶಿವಕುಮಾರ್ ಆಗ ಯಾಕೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದರು. ಕೇಂದ್ರ ಗೃಹ ಸಚಿವರು ದಿಟ್ಟ ಹೆಜ್ಜೆ ಇಟ್ಟು ಮುನ್ನುಗುತ್ತಿದ್ದಾರೆ. ನಾವು ಶಾಂತಿ ಕಾಪಾಡಬೇಕು ಎಂಬ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್ ಶಾಂತಿ ಕದಡುವ ಭಯೋತ್ಪಾದಕರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿದೆ. ಅಮಿತ್ ಶಾ ಮಾಡುತ್ತಿರುವ ಕೆಲಸ ಬೆಂಬಲಿಸಿ, ನೀವು ರಾಷ್ಟ್ರಭಕ್ತರಾಗುತ್ತೀರಿ. ಇಲ್ಲವಾದ್ರೇ ಭಯೋತ್ಪಾದಕರ ರಕ್ತ ನಿಮ್ಮ ಮೈಯಲ್ಲಿ ಹರಿಯುತ್ತಿದೆ ಎಂದು ರಾಜ್ಯದ ಜನ ತೀರ್ಮಾನ ಮಾಡ್ತಾರೆ. ಇವಾಗ ಅಲ್ಪ ಸ್ವಲ್ಪ ಸೀಟ್ ಬಂದಿದೆ. ಮುಂದಿನ ಚುನಾವಣೆಯಲ್ಲಿ ಭಯೋತ್ಪಾದಕರ ಜೊತೆ ಜನ ನಿಮ್ಮನ್ನು ಹೊರಗೆ ಕಳಿಸ್ತಾರೆ ಎಂದ ಈಶ್ವರಪ್ಪ ಹೇಳಿದ್ದಾರೆ.