ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪ್ರತ್ಯೇಕ ಅಭಿಪ್ರಾಯ ಸಂಗ್ರಹಣೆ ಮೂಲಕ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಸ್ಥಾನದಲ್ಲಿರಿಸಿ ವೀಕ್ಷಕರ ತಂಡ ನಾಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಲುಪಿಸಲಿ ದ್ದಾರೆ ಎಂಬ ಮಾಹಿತಿ ನಂಬಲರ್ಹ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗುವ ಪಟ್ಟಿಯ ಲೆಕ್ಕಾಚಾರದಲ್ಲಿ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಹಾಗೂ ಯುವ ಕಾಂಗ್ರೆಸ್ ನ ರಾಜ್ಯ ಪ್ರಮುಖ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯ ಎಚ್ ಸಿ ಯೋಗೀಶ್ ಹಾಗೂ ಮಾಜಿ ನಗರ ಪಾಲಿಕೆ ಸದಸ್ಯ ಮತ್ತು ವಕೀಲ ನರಸಿಂಹಮೂರ್ತಿ (ಬಾಬಣ್ಣ) ಅವರ ಹೆಸರನ್ನು ಪರಿಗಣಿಸಿದೆ ಎಂದು ಇದೇ ಮೂಲಗಳು ತಿಳಿಸಿವೆ.
ಶಿವಮೊಗ್ಗ ನಗರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಅವರ ವರ್ಚಸ್ಸು ಜಾತಿ ಮತ್ತು ವಿಶೇಷವಾಗಿ ಚುನಾವಣೆಯನ್ನು ಎದುರಿಸಲು ಬೇಕಾದಂತಹ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಲ ಮೂಲಗಳ ಪ್ರಕಾರ ಎಲ್ಲಾ ಅಭ್ಯರ್ಥಿ ಗಳ ಪಟ್ಟಿಯನ್ನು ಕಳುಹಿಸಿದ್ದರೂ ಸಹ ಮೊದಲ ಮೂರು ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಈ ಮೂವರ ಹೆಸರು ಇದೆ ಎಂದು ಇದೇ ಮೂಲಗಳು ತಿಳಿಸಿವೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಕರಿಯಣ್ಣ ಹಾಗೂ ಪಲ್ಲವಿ ಅವರ ಹೆಸರು ಮುಂಚೂಣಿ ಯಲ್ಲಿದೆ ಎಂದು ಹೇಳಲಾಗುತ್ತಿದೆ.
ಎಐಸಿಸಿ ವೀಕ್ಷಕರಾದ ಮಯೂರ್ ಜೆ. ಕುಮಾರ್, ಸೈಯದ್ ಅಹ್ಮದ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್, ಕೆಪಿಸಿಸಿ ಶಿವಮೊಗ್ಗ ಉಸ್ತುವಾರಿ ಹೆಚ್.ಎಂ. ರೇವಣ್ಣ, ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ ಅವರು ಆಗಮಿಸಿ ಶಿವಮೊಗ್ಗ ಜಿಲ್ಲಾ ೭ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಪಡೆದರು.
ಜಿಲ್ಲೆಯಲ್ಲಿ ೪೫ ಕ್ಕೂ ಹೆಚ್ಚು ಉಮೇದು ವಾರರು ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ ೧೨, ಗ್ರಾಮಾಂತರ ಕ್ಷೇತ್ರದಿಂದ ೧೩, ಭದ್ರಾವತಿಯಿಂದ ೧ ಸೇರಿ ಒಟ್ಟು ೪೫ ಅರ್ಜಿಗಳು ಕೆಪಿಸಿಸಿಗೆ ಸಲ್ಲಿಕೆಯಾಗಿದ್ದು, ಇವತ್ತು ಪಕ್ಷದ ಜಿಲ್ಲಾ ಕಚೇರಿ ಮುಂಭಾಗ ಬೆಂಬಲಿಗರ ದಂಡೇ ನೆರೆದಿತ್ತು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪರವಾಗಿ ನೂರಾರು ಬೆಂಬಲಿಗರು ಬೆಳಗ್ಗೆಯಿಂ ದಲೇ ಪ್ಲೇಕಾರ್ಡ್ ಪ್ರದರ್ಶಿಸಿ ಪ್ರಸನ್ನಕುಮಾರ್ ಪರವಾಗಿ ರಾಜ್ಯ ನಾಯಕರ ಗಮನಸೆಳೆಯಲು ಘೋಷಣೆ ಕೂಗುತ್ತಿರುವುದು ಕಂಡು ಬಂದಿತು.
ಮಧ್ಯಾಹ್ನ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದ್ದು, ಜಿ. ಪಲ್ಲವಿ ಹಾಗೂ ಡಾ. ಶ್ರೀನಿವಾಸ್ ಕರಿಯಣ್ಣ ಪರವಾಗಿ ಬೃಹತ್ ಅಭಿಮಾನಿಗಳು ಸೇರಿದ್ದರು. ಜಿ. ನಾರಾಯಣಸ್ವಾಮಿ ಕೂಡ ಗ್ರಾಮಾಂತ ರದಿಂದ ಸ್ಪರ್ಧೆಗೆ ಭಾರಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಂದರೇಶ್ ಕೂಡ ಆಕಾಂಕ್ಷಿಯಾಗಿದ್ದು, ಬೆಂಬಲಿಗರ ಪಡೆ ಬಂದ ಕೂಡಲೇ ವರಿಷ್ಠರೇನು ಟಿಕೆಟ್ ಕೊಡುವುದಿಲ್ಲ. ಎಲ್ಲರೂ ಶಾಂತವಾಗಿ ವರಿಷ್ಠರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಒಳ್ಳೆಯದು ಎಂದು ಹೇಳಿದರು.
ಆಕಾಂಕ್ಷಿಗಳ ಬೆಂಬಲಿಗರ ದಂಡೇ ಕಾಂಗ್ರೆಸ್ ಕಚೇರಿಗೆ ಹರಿದು ಬರುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಂಬಲಿಗರ ನಿಯಂತ್ರ ಣಕ್ಕೆ ಹರಸಾಹಸ ಪಡುವ ಪರಿಸ್ಥಿತಿ ಇತ್ತು. ಕೆಪಿಸಿಸಿ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಪ್ರಮುಖರಾದ ಕಿಮ್ಮನೆ ರತ್ನಾಕರ್, ಹೆಚ್.ಸಿ. ಯೋಗೀಶ್, ಎಸ್.ಕೆ. ಮರಿಯಪ್ಪ, ಎಲ್. ಸತ್ಯನಾರಾಯಣ್, ನರಸಿಂಹಮೂರ್ತಿ, ಎನ್. ರಮೇಶ್, ಕಲೀಂ ಪಾಷ, ನಿರ್ಮಲಾ, ಬಲ್ಕೀಶ್ ಬಾನು, ರಾಜನಂದಿನಿ, ರವಿಕುಮಾರ್, ವೈ.ಹೆಚ್. ನಾಗರಾಜ್, ದೀಪಕ್ ಸಿಂಗ್ ಹಾಗೂ ಕಾಂಗ್ರೆಸ್ ಬ್ಲಾಕ್ ಪದಾಧಿಕಾರಿಗಳು ಮತ್ತಿತರರು ಇದ್ದರು
ಅಭಿಪ್ರಾಯ ಸಂಗ್ರಹಣೆಯ ವಿವರ
ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಕಲ ಸಿದ್ಧತೆ ನಡೆಸುತ್ತಿದೆ ಬರುವ ಜನವರಿ ಒಂದರೊಳಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿ ಅಭ್ಯರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ನಿನ್ನೆ ಇಡೀ ದಿನ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಕಾಂಕ್ಷಿಗಳು ಹಾಗೂ ಅವರ ಪರವಾಗಿ ಬೆಂಬಲಿಗರ ದಂಡು ಜಮಾಯಿಸಿತ್ತು. ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದವರನ್ನು ಪ್ರತ್ಯೇಕವಾಗಿ ವಿಚಾರಿಸುವ ಮೂಲಕ ಇರುವ ಅಭ್ಯರ್ಥಿಗಳಲ್ಲಿ ಮೂವರನ್ನು ಆಯ್ಕೆ ಮಾಡಿ ಕೆಪಿಸಿಸಿಗೆ ಮೊದಲ ಆದ್ಯತೆ ಹೆಸರುಗಳನ್ನಾಗಿ ನೀಡುವ ಹೊಣೆಗಾರಿಕೆ ಈ ತಂಡದ ಮೇಲಿದೆ ರಾಜ್ಯದ ಕೆಪಿಸಿಸಿಯ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಪ್ರತಿ ತಂಡವು ತಲಾ ಒಂಬತ್ತು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಜೊತೆ ಚರ್ಚಿಸುವ ಮೂಲಕ ಅಭ್ಯರ್ಥಿಗಳ ಜಾತಿ, ಮತ, ಮತದಾರರ ಆಕಾಂಕ್ಷೆಗಳು ಮತ್ತು ಅಭ್ಯರ್ಥಿ ಚುನಾವಣೆಯನ್ನು ಎದುರಿಸಲು ಆರ್ಥಿಕವಾಗಿ ಸಬಲನೆ ಎಂಬ ಮಾಹಿತಿ ಕ್ರೋಡಿಕರಿಸಿ ನೀಡುವ ಪದ್ಧತಿ ಇದಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪಕ್ಷದ ವೀಕ್ಷಕರು ಆಗಮಿಸಿ ವಿಧಾನಸಭೆ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದರು.
.