(ಸಂಗ್ರಹ ಸುದ್ದಿ ವಿಜಯಕರ್ನಾಟಕ ಕೃಪೆ)
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು, 2023ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಸಕಲ ಸಿದ್ಧತೆಯನ್ನು ನಡೆಸಿದೆ. ಇದರ ಮಧ್ಯ ಈಗ ಕೊರೊನಾ ಹಾವಳಿ ಶುರುವಾಗಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೋ ಇಲ್ಲವೋ ಎನ್ನುವ ಗೊಂದಲ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮೂಡಿದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ಅಷ್ಟೇನು ದಾಖಲಾಗದಿರುವ ಹಿನ್ನಲೆ ಮತ್ತು ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ ಎನ್ನಲಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರಿಯಾದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪರೀಕ್ಷೆ ನಡೆಸಲು ಪೂರ್ವ ತಯಾರಿ ನಡೆಯುತ್ತಿದೆ. ಇತ್ತೀಚಿನ ಕಳೆದ ಕೆಲವು ವರ್ಷಗಳಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಕಡಿಮೆ ದಾಖಲಾಗುತ್ತಿರುವ ಹಿನ್ನಲೆಯಲ್ಲಿ, ಈ ಬಾರಿ ಕೆಲವು ಬದಲಾವಣೆಯೊಂದಿಗೆ ಪರೀಕ್ಷೆ ನಡೆಸಲು ಮಂಡಳಿ ನಿರ್ಧರಿಸಿದೆ.
ಪಿಯುಸಿ ಪ್ರಶ್ನೆಪತ್ರಿಕೆ
ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಈ ಬಾರಿ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿದೆ.
ಒಟ್ಟಾರೆ 100 ಅಂಕಗಳ ಪ್ರಶ್ನೆಪತ್ರಿಯಾಗಿದ್ದು, 10 ಅಂಕಗಳಿಗೆ ಎಂಸಿಕ್ಯು, 5 ಅಂಕಗಳಿಗೆ ಹೊಂದಿಸಿ ಬರೆಯಿರಿ, 5 ಅಂಕಗಳಿಗೆ ಬಿಟ್ಟ ಸ್ಥಳ ತುಂಬಿರಿ ನೀಡಲಾಗಿದೆ. ಒಟ್ಟು 20 ಅಂಕಗಳಿಗೆ ಸುಲಭ ಪ್ರಶ್ನೆಗಳು ಇರಲಿದ್ದು, ಕನಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಈ ಮಾದರಿ ಸಹಕಾರಿಯಾಗಲಿ ಎನ್ನುವುದು ಮಂಡಲಿಯ ಮುಖ್ಯ ಉದ್ದೇಶವಾಗಿದೆ.
ಇನ್ನೂ, 80 ಅಂಕಗಳಿಗೆ ವಾಕ್ಯ ರಚನೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿವಿಧ ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಲಾಗುತ್ತದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, ಹಾಗು 5 ಅಂಕದ ಮತ್ತು 6 ಅಂಕದ 2 ಪ್ರಶ್ನೆಗಳನ್ನು ನೀಡಲಾಗುತ್ತದೆ.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವಿಷಯವಾರು ಮಾದರಿ ಪ್ರಶ್ನೆಪತ್ರಿಕೆ:
ಈ 80 ಅಂಕಗಳ ಪ್ರಶ್ನೆಗಳಲ್ಲಿ ಸಂದರ್ಭ ಸೂಚಿಸಿ ಬರೆಯುವುದು, ಸ್ವಾರಸ್ಯ ರೂಪದಲ್ಲಿ ಉತ್ತರ, ಪದ್ಯದ ಭಾವಾರ್ಥ, ಭಾಷಾಭ್ಯಾಸ, ಪ್ರಬಂಧ, ಪತ್ರಲೇಖನ ಮತ್ತು ಗಾದೆಮಾತು ವಿಸ್ತರಿಸಿ ಬರೆಯುವ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಈ ಬದಲಾವಣೆ ತರುವ ಮೂಲ ಉದ್ದೇಶ ಫಲಿತಾಂಶ ವನ್ನು ಹೆಚ್ಚಳ ಮಾಡುವುದಾಗಿದೆ. ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಸಿದಾಗ ರಾಜ್ಯದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಮತ್ತು ಅಂಕಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದನ್ನು ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಪದವಿ ಕಾಲೇಜುಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಫಲಿತಾಂಶವೇ ಮುಖ್ಯವಾಗಿರುತ್ತದೆ. ಇತ್ತೀಚಿನ ಕಳೆದ ಕೆಲವು ವರ್ಷಗಳಿಂದ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಈ ಪ್ರಶ್ನೆಪತ್ರಿಕೆ ಮಾದರಿ ಅಳವಡಿಕೆಯಿಂದ ಪಿಯು ಫಲಿತಾಂಶ ಹೆಚ್ಚಳವಾದರೆ ಪದವಿ ಪ್ರವೇಶಕ್ಕೆ ಅನುಕೂಲವಾಗಲಿದೆ ಎಂಬ ಚಿಂತನೆ ಇದೆ.