Site icon TUNGATARANGA

ಶಿವಮೊಗ್ಗ/ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ.., ಬಿಸಿಸಿಐನಿಂದ ಆಯೋಜನೆ | ಸಕಲ ಸಿದ್ದತೆ | ಡಿ.ಎಸ್.ಅರುಣ್, ಹೆಚ್.ಎಸ್.ಸದಾನಂದ್ ವಿವರ


ಶಿವಮೊಗ್ಗ, ಡಿ.24:
ದೇಶಿಯಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಪ್ರಥಮ ಬಾರಿಗೆ ಬಿಸಿಸಿಐಯು ದೇಶದಲ್ಲಿ 17 ವರ್ಷ ವಯೋಮಿತಿಯ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದ ಅದರಲ್ಲಿನ 32 ರಾಜ್ಯಗಳ 6 ತಂಡಗಳಂತಿರುವ ಎ ಗುಂಪಿನ 6 ,ತಂಡಗಳ ಪಂದ್ಯಾವಳಿ ಶಿವಮೊಗ್ಗ ನವುಲೆ ರಸ್ತೆಯಲ್ಲಿರುವ ಕೆಎಸ್‌ಸಿಎ ಹಾಗೂ ಜೆಎನ್‌ಎನ್‌ಸಿಇ ಅಂಕಣದಲ್ಲಿ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಶಿವಮೊಗ್ಗ ಝೋನ್‌ನ ಕೆಎಸ್‌ಸಿಎ ಛೇರ್ಮನ್ ಡಿ.ಎಸ್.ಅರುಣ್ ಮತ್ತು ವಲಯ ಸಂಚಾಲಕ ಹೆಚ್.ಎಸ್.ಸದಾನಂದ್ ತಿಳಿಸಿದರು.


ಎ. ಗುಂಪಿನಲ್ಲಿ ವೆಸ್ಟ್ ಬೆಂಗಾಲ್, ತಮಿಳುನಾಡು, ಉತ್ತರಾಖಾಂಡ, ವಿದರ್ಭ, ಹಿಮಾಚಲ ಪ್ರದೇಶ ಹಾಗೂ ತ್ರಿಪುರಾ ರಾಜ್ಯಗಳ ತಂಡಗಳು ಡಿ.26 ರಿಂದ ಜ.೩ರವರೆಗೆ ನಡೆಯಲಿರುವ ಪಂದ್ಯಗಳಲ್ಲಿ ಬಾಗವಹಿಸಲಿವೆ. ದಿನಬಿಟ್ಟು ದಿನದಂತೆ ಪ್ರತಿದಿನ ಮೂರು ಪಂದ್ಯಗಳು ನಡೆಯಲಿವೆ ಎಂದು ಅವರು ಇಂದು ಬೆಳಿಗ್ಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಪಂದ್ಯಗಳು ಬಿಳಿ ಬಣ್ಣದ ಬಾಲ್ ಹಾಗೂ ಬಿಳಿ ಪೋಷಾಕಿನಲ್ಲಿ ನಡೆಯಲಿವೆ ಎಂದ ಅವರು ಪಂದ್ಯಗಳು ಬಿಸಿಸಿಐನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತೃತ್ವದಲ್ಲಿ ನಡೆಯಲಿವೆ. ಪ್ರತಿ ಪಂದ್ಯ ಮುವತ್ತೈದು ಓವರ್‌ಗಳಿಗೆ ಸೀಮಿತವಾಗಿದ್ದು ಬೆಳಿಗ್ಗೆ ೯ಕ್ಕೆ ಪಂದ್ಯಾವಳಿ ಆರಂಭಗೊಳ್ಳಲಿದೆ.ಅದಕ್ಕೆ ಶಿವಮೊಗ್ಗ ವಲಯ ತಂಡವು ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು.
ಡಿ.26 ರ ಬೆಳಿಗ್ಗೆ ಎಂಟು ಗಂಟೆಗೆ ನವುಲೆ ಕ್ರೀಡಾಂಗಣದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಉದ್ಘಾಟಿಸಲಿದ್ದಾರೆ. ಇದೇ ದಿನ ಜೆಎನ್‌ಎನ್‌ಇ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಕೆ. ನಾಗೇಂದ್ರ ಅವರು ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಗೆ ಉಚಿತ ಪ್ರವೇಶವಿದ್ದು ಕ್ರೀಡಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವಿನಂತಿಸಿದ್ದಾರೆ.

Exit mobile version