Site icon TUNGATARANGA

ರೈತ ಸಂಘಗಳು ಶುದ್ಧವಾಗಬೇಕು / ರೈತ ಸಂಘಟನೆಯನ್ನು ಬಲಪಡಿಸುವುದು ಚಳವಳಿಗಳನ್ನು ರೂಪಿಸುವುದು ಇಂದಿನ ಅಗತ್ಯ: ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ರೈತ ಸಂಘಗಳು ಶುದ್ಧವಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು. 

ಅವರು ಇಂದು ರೋಟರಿ ರಕ್ತನಿಧಿಯಲ್ಲಿ ಹಮ್ಮಿಕೊಂಡಿದ್ದ ರೈತನಾಯಕ ಎನ್.ಡಿ. ಸುಂದರೇಶ್ ಅವರ 30 ನೇ ನೆನಪಿನ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರೈತ ಸಂಘಟನೆಯನ್ನು ಬಲಪಡಿಸುವುದು ಚಳವಳಿಗಳನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ. ಆದರೆ, ಇಲ್ಲಿ ಕೂಡ ಒಂದಿಷ್ಟು ಗೊಂದಲಗಳಿವೆ. ಎಲ್ಲಾ ರೈತ ಸಂಘಗಳು ಒಟ್ಟಾಗಬೇಕೆಂಬುದೇ ಎಲ್ಲರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ನಾನು ಕೂಡ ಸುಮಾರು 10 ಕ್ಕೂ ಹೆಚ್ಚು ರೈತ ಸಂಘಗಳ ಭೇಟಿ ಮಾಡಿ ಸಮಾಲೋಚನೆ ಮಾಡಿದ್ದು, ಒಟ್ಟಾಗಿ ಹೋಗೋಣ ಎಂದಿದ್ದೇನೆ. ಚುಕ್ಕಿ ನಂಜುಂಡಸ್ವಾಮಿ ಅವರು ಕೂಡ ಬಂದಿದ್ದರು. ಆದರೆ ಅದೆಕೋ ಗೊತ್ತಿಲ್ಲ. ಕೆಲವರು ಮತ್ತೆ ಹಿಂದಕ್ಕೆ ಹೋಗಿದ್ದಾರೆ. ಒಂದಾಗಲು ನಾವು ಸಿದ್ಧ ಎಂದರು.

ಸುಂದರೇಶ್ ಅವರು ಮಿಂಚಿನ ಸಂಚಾರದ ಮೂಲಕ ಇಡೀ ರಾಜ್ಯ ಸುತ್ತಿ ರೈತ ಸಂಘವನ್ನು ಬಲಿಷ್ಠವಾಗಿ ಕಟ್ಟಿದವರು. ಕುಟುಂಬದ ಕೆಲಸಗಳನ್ನು ಬಿಟ್ಟು ರೈತರ ಏಳಿಗೆಗಾಗಿ ದುಡಿದವರು. ಅವರ ಜೊತೆಗೆ ಹೆಚ್.ಎಸ್. ರುದ್ರಪ್ಪ, ನಂಜುಂಡಸ್ವಾಮಿ, ಕಡಿದಾಳ್ ಶಾಮಣ್ಣ ಹಾಗೂ ನಾನು ಸೇರಿದಂತೆ ಹಲವರು ರೈತ ಸಂಘವನ್ನು ಅತ್ಯಂತ ವೇಗದಲ್ಲಿ ಬೆಳೆಸಿದ್ದೆವು, ಬಾಳಿಸಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ತೊಡಕುಗಳಾಗಿರುವುದು ನಿಜ. ಇಂತಹ ಸಂದರ್ಭದಲ್ಲಿ ಸುಂದರೇಶ್ ಅವರನ್ನು ಕೇವಲ ನೆನಪು ಮಾಡಿಕೊಂಡರೆ ಸಾಲದು, ಅವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ರೈತರ ಸಮಸ್ಯೆಗಳು ಸಾಕಷ್ಟಿವೆ. ಬೆಳಗಾವಿ ಅಧಿವೇಶನದಲ್ಲಿ ಅವುಗಳನ್ನು ಬಗೆಹರಿಸಲು ಈಗಾಗಲೇ ಪ್ರತಿಭಟನೆ ನಡೆಸಿ ಮನವಿ ಮಾಡಿದ್ದೇವೆ. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ ಎಂಬ ನಂಬಿಕೆ ಇದೆ. ಕಬ್ಬು ಬೆಳೆಗಾರರ ಸಮಸ್ಯೆಯೂ ಇದೆ. ಪ್ರಮುಖವಾಗಿ ರಾಜ್ಯ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕಾಗಿದೆ ಎಂದರು.

ರೈತ ಸಂಘದ ರಾಜ್ಯ ಖಜಾಂಚಿ ಡಾ. ಬಿ.ಎಂ. ಚಿಕ್ಕಸ್ವಾಮಿ ಮಾತನಾಡಿ, ಸುಂದರೇಶ್ ಅವರ ಆದರ್ಶಗಳನ್ನು ಬೆಳೆಸೋಣ. ಪ್ರಾಮಾಣಿಕತೆಯಿಂದ ಸಂಘಟನೆ ಕಟ್ಟೋಣ. ರೈತ ಸಂಘ ಮತ್ತೊಮ್ಮೆ ರಾಜ್ಯದಲ್ಲಿ ವಿಜೃಂಭಿಸುತ್ತದೆ. ರೈತರ ಸಮಸ್ಯೆಗಳ ವಿರುದ್ಧ ಬಹುದೊಡ್ಡ ಚಳವಳಿಯನ್ನು ನಾವು ಕಟ್ಟುತ್ತೇವೆ ಎಂದರು.

ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ. ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾಧ್ಯಕ್ಷ ಶಿವಮೂರ್ತಿ, ಪದಾಧಿಕಾರಿಗಳಾದ ಇ.ಬಿ. ಜಗದೀಶ್, ಸಿ. ಚಂದ್ರಪ್ಪ, ಜಿ.ಎನ್. ಪಂಚಾಕ್ಷರಿ, ರಕ್ತನಿಧಿ ಅಧ್ಯಕ್ಷ ಮಂಜಪ್ಪ ಮೊದಲಾದವರಿದ್ದರು. 

Exit mobile version