Site icon TUNGATARANGA

ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ/ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ದ ವಾಗ್ದಾಳಿ

ಶಿವಮೊಗ್ಗ: ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಅದರಲ್ಲೂ ಕೇಂದ್ರ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ವಿರೋಧ ಪಕ್ಷಗಳ ನಾಯಕರುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಸಿಬಿಐ ದಾಳಿ ನಡೆಸಿರುವುದೇ ಆಗಿದೆ ಎಂದ ಅವರು ಬಿಜೆಪಿ ಮುಖಂಡರ ವಿದ್ಯಾ ಸಂಸ್ಥೆಗಳು ಇಲ್ಲವೇ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರ ಶಿಕ್ಷಣ ಸಂಸ್ಥೆಗಳು ಒಂದು ವಿಶ್ವ ವಿದ್ಯಾಲಯದಂತೆ ಕೆಲಸ ಮಾಡುತ್ತಿವೆ. ಆದರೂ ಏಕೆ ಆ ಸಂಸ್ಥೆಗಳ ಮೇಲೆ ದಾಳಿ ನಡೆದಿಲ್ಲ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಲು ಧರ್ಮಸ್ಥಳದಂತಹ ಕ್ಷೇತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಗರದ ಶಾಸಕ ಹರತಾಳು ಹಾಲಪ್ಪ ಎರಡನೆ ಬಾರಿ ದರ್ಮಸ್ಥಳಕ್ಕೆ ಹೋಗಿದ್ದಾರೆ. ಈ ರೀತಿ ಸಮಸ್ಯೆಯನ್ನು ದೇವರ ಮೇಲೆ ಹಾಕುವುದು ಎಷ್ಟು ಸಮಂಜಸ, ಇದು ಧರ್ಮಸ್ಥಳಕ್ಕೆ ಮಾಡಿದ ಅವಮಾನ ಅಥವಾ ಕಾಂತಾರ ಸಿನಿಮಾದ ಮಹಿಮೆ ಇರಬೇಕು ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪ ಭಿನ್ನಮತದ ಕೇಂದ್ರಬಿಂದುವಾಗಿದ್ದಾರೆ. ಸಚಿವ ಸ್ಥಾನದ ಬೇಡಿಕೆ ಇಟ್ಟು ಅಧಿವೇಶನಕ್ಕೇ ಹೋಗಿಲ್ಲ. ಬಿಜೆಪಿಯಲ್ಲಿ ಭಿನ್ನಮತ ಈ ಆರಂಭವಾಗಿದೆ. ಬಿಜೆಪಿಯಲ್ಲೇ ಇದ್ದ ಡಾ. ಧನಂಜಯ ಸರ್ಜಿ ಅವರನ್ನು ಇವರು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಹಾಗೆಯೇ ಕೆ.ಎಸ್. ಈಶ್ವರಪ್ಪನವರನ್ನು ಕೂಡ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲಿ ಎಂದರು.

ಇತ್ತೀಚೆಗೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗ ಸಹಜವಾಗಿ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಆದರೆ ಈ ಸಾವನ್ನು ರೇಣುಕಾಚಾರ್ಯ ರಾಜಕೀಯಕ್ಕೆ ಬಳಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿಯ ಅಜೆಂಡಾವೇ ಬೇರೆಯಾಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಹಿಂದುತ್ವ, ವಿರಾಟ್ ಸಮಾವೇಶಗಳು ಪ್ರಾರಂಭವಾಗುತ್ತವೆ. ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಅರ್ಥವಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗುತ್ತಿದೆ. ಅಡಿಕೆ ಬೆಳೆಗಾರರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಮಕ್ಕಳಿಗೆ ಸೈಕಲ್ ಕೊಡುವುದನ್ನು ನಿಲ್ಲಿಸಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಬಗ್ಗುಬಡಿಯುವ ಕೆಲಸ ಕೆಲ ಬಿಜೆಪಿ ನಾಯಕರುಗಳಿಂದಲೇ ನಡೆಯುತ್ತಿದೆ. ಹೀಗೆ ಬಿಜೆಪಿಯಲ್ಲಿ ಸಾಲುಸಾಲು ದೋಷಗಳು ಕಂಡುಬರುತ್ತಿವೆ. ಒಟ್ಟಾರೆ ಬಿಜೆಪಿ ದರಿದ್ರ ಸರ್ಕಾರವಾಗಿದೆ. ಮತದಾರರು ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ದೀಪಕ್ ಸಿಂಗ್, ರಾಜ್ಕುಮಾರ್ ಇದ್ದರು.

Exit mobile version