Site icon TUNGATARANGA

ಎತ್ತಿನ ಓಟ ಕ್ರೀಡೆ ಮುನ್ನ ಅನುಮತಿ ಪಡೆಯದಿದ್ದಲ್ಲಿ ಕ್ರಮ: ಡಾ.ಆರ್.ಸೆಲ್ವಮಣಿ


    ಎತ್ತಿನ ಓಟ/ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಆಯೋಜಕರು ಕ್ರೀಡೆಗೆ ಮುನ್ನ ಸ್ಥಳೀಯ ವ್ಯಾಪ್ತಿಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.


      ಎತ್ತಿನ ಓಟ/ಎತ್ತಿನ ಗಾಡಿ ಓಟ ಕ್ರೀಡೆಯ ಮಾರ್ಗಸೂಚಿ ಕುರಿತು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


    ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ(ಕರ್ನಾಟಕ ತಿದ್ದುಪಡಿ) ಸುಗ್ರೀವಾಜ್ಞೆ 2017 ರನ್ವಯ ಎತ್ತಿನ ಓಟ/ಎತ್ತಿನ ಗಾಡಿ ಓಟ ಆಯೋಜಿಸುವ ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.
      ಎತ್ತಿನ ಓಟ ನಡೆಸುವ ಗ್ರಾಮಗಳಲ್ಲಿ ಮೊದಲು ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯರಿಂದ ಎನ್‍ಓಸಿ ಪಡೆದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿಯನ್ನು ಅವರು ವಿವರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳು ಈ ಕ್ರೀಡೆಯಿಂದ ಆಗುವ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅನುಮತಿ ನೀಡುವರು ಅಥವಾ ತಿರಸ್ಕರಿಸುವರು.


   ಒಂದು ವೇಳೆ ಅನುಮತಿ ಪಡೆಯದೇ ಹೋದಲ್ಲಿ ಸ್ಥಳೀಯ ಸಂಸ್ಥೆಗಳು ಜವಾಬ್ದಾರರಾಗುತ್ತಾರೆ ಹಾಗೂ ಆಯೋಜಕರ ವಿರುದ್ದ ಸೂಕ್ತ ಕ್ರಮ ವಹಿಸಲಾಗುವುದು. ಈ ಕ್ರೀಡೆಯ ಆಯೋಜನೆ ಪರಿಶೀಲಿಸಲು ಕಂದಾಯ ಇಲಾಖೆ, ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಎಸ್‍ಪಿಸಿಎ(ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಕ್ರುಯೆಲ್ಟಿ ಆಫ್ ಅನಿಮಲ್)ಪ್ರತಿನಿಧಿ ಇರುವರು.


    ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಓ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಷರತ್ತುಗಳಿಗೊಳಪಟ್ಟು ಎತ್ತಿನ ಓಟ ಕ್ರೀಡೆಯನ್ನು ನಡೆಸುವ ಸಂಬಂಧ ಅಧಿಕಾರಿಗಳಿಗೆ ಸಭೆ ನಡೆಸಿ ಅರಿವು ಮೂಡಿಸಬೇಕು ಹಾಗೂ ಈ ಸಂಬಂಧ ತಂಡ ಸನ್ನದ್ದವಾಗಿರಬೇಕು ಎಂದರು.


      ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಎತ್ತಿನ ಓಟದ ಅಧಿಸೂಚನೆ ಉದ್ದೇಶ ಪ್ರಾಣಿಗಳಿಗೆ ಆಗುವ ಕ್ರೌರ್ಯ ಹಾಗೂ ಮನುಷ್ಯರಿಗೆ ಆಗುವ ಹಾನಿ ತಡೆಗಟ್ಟುವುದಾಗಿದ್ದು, ಕ್ರೀಡೆಯಲ್ಲಿ ಭಾಗಿಯಾಗುವ ಎತ್ತುಗಳಿಗೆ ಅಪಘಾತ ಸಂಭವಿಸಿದಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆ, ಆಂಬುಲೆನ್ಸ್ ಇತರೆ ವ್ಯವಸ್ಥೆ ಸೇರಿದಂತೆ ಮಾರ್ಗಸೂಚಿಯಲ್ಲಿನ ಎಲ್ಲ ಅಂಶಗಳನ್ನು ಅನುಸರಿಸಬೇಕು. ಜೊತೆಗೆ ಕ್ರೀಡಾ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಜನರನ್ನು ನಿಯಂತ್ರಿಸಲು ಸ್ಥಳೀಯರನ್ನು ನೇಮಿಸಬೇಕು. ಹಾಗೂ ಆ ಸ್ಥಳದಲ್ಲಿ ಮದ್ಯ ಸೇವನೆ ಮಾಡಿದವರಿಗೆ ಬಿಡಬಾರದು ಎಂದು ತಿಳಿಸಿದರು.


     ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಕ್ರೀಡೆಯ ಆಯೋಜಕರು ಎತ್ತುಗಳಿಗೆ ಒಂದು ಪ್ರತ್ಯೇಕ ಸಮತಟ್ಟಾದ ಟ್ರ್ಯಾಕ್ ನಿರ್ಮಿಸಿ, ಗರಿಷ್ಟ 100 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲ ಇರಬೇಕು. ಹಾಗೂ ಮಧ್ಯಾಹ್ನ 12 ರಿಂದ 3 ಗಂಟೆ ನಡುವಿನ ಅವಧಿ 38 ಡಿಗ್ರಿ ಸಿ ಉಷ್ಣಾಂಶ ಮೀರಿದ ಯಾವುದೇ ಪ್ರದೇಶದಲ್ಲಿ ಎತ್ತಿನ ಓಟ ಕ್ರೀಡೆಗಾಗಿ ಎತ್ತುಗಳನ್ನು ಬಳಸುವಂತಿಲ್ಲ ಎಂದರು.
      ಸಭೆಯಲ್ಲಿ ಪ್ರಭಾರ ಐಎಎಸ್ ಅಧಿಕಾರಿ ದಲ್ಜೀತ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ತಹಶೀಲ್ದಾರ್ ಡಾ.ನಾಗರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಇತರೆ ತಾಲ್ಲೂಕುಗಳ ತಹಶೀಲ್ದಾರ್, ಇಓ, ಪಶುಸಂಗೋಪನೆ ಇತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version