Site icon TUNGATARANGA

ಬೊಮ್ಮಾಯಿ ಈಸ್ ನಾಟ್ ಸದಾನಂದಗೌಡ, ಯಡಿಯೂರಪ್ಪರ ಬಗ್ಗೆ ಜಾಣ ನೆಡೆ.., ಏನು? ಹೇಗೆ? ಯಾಕೆ? ಈ ಲೇಖನ ಓದಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದುಮ್ಮಾನ ಕಳೆದ ವಾರ ದೊಡ್ಡ ಸುದ್ದಿಯಾಯಿತು.
ಪಕ್ಷ ತಮ್ಮನ್ನು ನಿರ್ಲಕ್ಷಿಸುತ್ತಿರುವುದರಿಂದ ಯಡಿಯೂರಪ್ಪ ಸಿಟ್ಟಿಗೆದ್ದಿದ್ದಾರೆ ಎಂಬಲ್ಲಿಂದ ಶುರುವಾದ ಈ ಎಪಿಸೋಡು ರಾಜಾಹುಲಿ ಘರ್ಜನೆಗೆ ತತ್ತರಿಸಿದ ಬಿಜೆಪಿ ಎಂಬಲ್ಲಿಗೆ ತಲುಪಿ ಆವಿಯಾಯಿತು.
ಈ ಮಧ್ಯೆ ಯಡಿಯೂರಪ್ಪ ಯಾವ ಕಾರಣಕ್ಕಾಗಿ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬುದಕ್ಕೆ ನಾನಾ ಬಗೆಯ ವ್ಯಾಖ್ಯಾನಗಳು ಕೇಳಿ ಬಂದವು.


ಅಧಿಕಾರ ಕಳೆದುಕೊಂಡ ಮೇಲೆ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗುತ್ತಿದೆ.ಜಲಸಂಪನ್ಮೂಲದಿಂದ ಹಿಡಿದು ಲೋಕೋಪಯೋಗಿ ಖಾತೆಯವರೆಗಿನ ವ್ಯವಹಾರಗಳಲ್ಲಿ ಅವರ ಮಾತು ನಡೆಯದಂತೆ ಮಾಡಲಾಗಿದೆ.ಇದರಿಂದ ಕೋಪಗೊಂಡಿರುವ ಯಡಿಯೂರಪ್ಪನವರು ಸಿಎಂ ಬೊಮ್ಮಾಯಿ ಅವರ ಬಳಿ ಏನೂ ಹೇಳುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದವು.
ಅಂದ ಹಾಗೆ ಇಂತಹ ಮಾತುಗಳ ಕತೆ ಏನೇ ಇರಲಿ,ಆದರೆ ಒಂದು ಸಂಗತಿ ಯಡಿಯೂರಪ್ಪನವರಿಗೂ ಗೊತ್ತು. ಬಿಜೆಪಿಯ ಇತರ ನಾಯಕರಿಗೂ ಗೊತ್ತು.ಅದೆಂದರೆ ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಟರ ನಡುವಣ ಸಂಬಂಧ ಯಾವತ್ತೋ ಹಳಸಲಾಗಿ ಹೋಗಿದೆ.
ಪಕ್ಷ ತಮ್ಮನ್ನು ರಾಷ್ಟ್ರೀಯ ಸಂಸದೀಯ ಮಂಡಳಿಗೆ ನೇಮಕ ಮಾಡಿದ ಬೆಳವಣಿಗೆಯಿಂದ ಯಡಿಯೂರಪ್ಪ ಅವರೇನೂ ಖುಷಿ ಎದ್ದು ಹೋಗಿಲ್ಲ. ಅದೇ ರೀತಿ ಯಡಿಯೂರಪ್ಪ ಅದೆಂತಹ ಪಕ್ಷ ನಿಷ್ಟೆ ತೋರಿದರೂ ಬಿಜೆಪಿ ವರಿಷ್ಟರು ಅವರನ್ನು ನಂಬುವ ಸ್ಥಿತಿಯಲ್ಲಿಲ್ಲ.


ತಮ್ಮ ನಿಯಂತ್ರಣದಿಂದ ಅಧಿಕಾರ ಜಾರಿರುವುದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲದೆ ಇರಲಿ, ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಅದರ ಸಾರಥ್ಯ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ದಕ್ಕುವಂತಾಗಲಿ ಅಂತ ಯಡಿಯೂರಪ್ಪ ಬಯಸಿದ್ದಾರೆ ಎಂಬುದು ವರಿಷ್ಟರ ಅನುಮಾನ.
ಪರಿಸ್ಥಿತಿ ಹೀಗಿದ್ದರೂ ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಟರು ಪರಸ್ಪರ ಅಚ್ಚಾ,ಅಚ್ಚಾ ಮಾಡಿಕೊಂಡೇ ಬರುತ್ತಿದ್ದಾರೆ.ಕಾರಣ? ಈ ವಿಶ್ವಾಸಕ್ಕಿರುವ ಅವಲಂಬನೆ.
ಯಡಿಯೂರಪ್ಪನವರನ್ನು ಸಂಪೂರ್ಣವಾಗಿ ದೂರವಿಟ್ಟರೆ ಪ್ರಬಲ ಲಿಂಗಾಯತ ಸಮುದಾಯ ಕೆರಳಬಹುದು ಎಂಬುದು ವರಿಷ್ಟರ ಲೆಕ್ಕಾಚಾರ.ಅದೇ ರೀತಿ ತಾವು ತಿರುಗಿ ಬಿದ್ದರೆ ಮೋದಿ-ಅಮಿತ್ ಶಾ ಜೋಡಿ ಇಕ್ಕಳ ಹಾಕಲು ಹಿಂಜರಿಯುವುದಿಲ್ಲ ಎಂಬುದು ಯಡಿಯೂರಪ್ಪವರ ಯೋಚನೆ.
ಅರ್ಥಾತ್, ಅನುಮಾನದ ಮೇಲೆ ನಿಂತಿರುವ ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಟರ ಸಂಬಂಧ ರಾಜಕಾರಣದ ಪಡಸಾಲೆಯಲ್ಲಿ ಮುಗ್ಗಲು ವಾಸನೆ ಎಬ್ಬಿಸಿರುವುದು ನಿಜ.


ಹೀಗಾಗಿ ಮುಗ್ಗಲೆದ್ದಿರುವ ಸಂಬಂಧದ ಬಗ್ಗೆ ಎಷ್ಟೇ ವ್ಯಾಖ್ಯಾನಿಸಿದರೂ ಅದರ ಬಾಳಿಕೆ ಧೀರ್ಘ ಕಾಲದ್ದಲ್ಲ. ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಪ್ರಧಾನಿ ಮೋದಿಯವರಿಗಿರುವ ಅಸಹನೆ ಮತ್ತು ತಮ್ಮ ಉತ್ತರಾಧಿಕಾರಿಯನ್ನು ನೆಲೆಗೊಳಿಸಲು ಯಡಿಯೂರಪ್ಪ ಅವರಿಗಿರುವ ಕಾತುರತೆ ಪರಸ್ಪರ ವಿರುದ್ಧ ಧ್ರುವಗಳು ಎಂಬುದು ಅರ್ಥವಾದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ


ಅಂದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರಿಗೆ ಎಷ್ಟೇ ಆಪ್ತರೆಂಬಂತೆ ನಡೆದುಕೊಳ್ಳುತ್ತಿದ್ದರೂ ಅದು ಮೇಲ್ನೋಟಕ್ಕೆ ಕಾಣಿಸುವಷ್ಟು ಅಪ್ಯಾಯಮಾನವಾಗಿ ಉಳಿದಿಲ್ಲ.
ಆದರೆ ಅದಕ್ಕೆ ಬೊಮ್ಮಾಯಿಯವರೇ ಕಾರಣ ಅಂತಲೂ ಅಲ್ಲ.ಬದಲಿಗೆ ಎದುರಾಗುತ್ತಿರುವ ಸನ್ನಿವೇಶಗಳೇ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ನಡುವೆ ಅಂತರ ಸೃಷ್ಟಿಸಿವೆ.
ಆದರೆ ಈ ವಿಷಯ ಬಂದಾಗ ಬೊಮ್ಮಾಯಿ ಅವರ ಜಾಣ ನಡಿಗೆಯನ್ನು ಮೆಚ್ಚಲೇಬೇಕು.ಯಾಕೆಂದರೆ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳಿ ಎಂಬ ಒತ್ತಡಗಳಿಗೆ ಅವರು ಬಲಿಯಾಗಿಲ್ಲ.
ಹಾಗಂತ ಯಡಿಯೂರಪ್ಪ ಮತ್ತವರ ಬಳಗ ಹೇಳಿದ್ದನ್ನೆಲ್ಲ ಅವರು ನಡುಬಗ್ಗಿಸಿ ಅನುಸರಿಸುತ್ತಲೂ ಇಲ್ಲ.


ಅರ್ಥಾತ್,ಮುಖ್ಯಮಂತ್ರಿ ಹುದ್ದೆಗೇರಿ ಹದಿನಾರು ತಿಂಗಳು ಕಳೆದರೂ ಅವರು ಮತ್ತೊಬ್ಬ ಸದಾನಂದಗೌಡರಾಗಿಲ್ಲ.ಅಂದ ಹಾಗೆ
ಈ ಹಿಂದೆ ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ ವರದಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿತಲ್ಲ?
ಆನಂತರ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದಗೌಡರು ಕೆಲವೇ ಕಾಲದಲ್ಲಿ ಯಡಿಯೂರಪ್ಪ ಅವರಿಗೆ ತಿರುಗಿ ಬಿದ್ದಿದ್ದರು.ಇದಕ್ಕೆ ಕಾರಣರಾದವರು ಲಾಲ್ ಕೃಷ್ಣ ಅಡ್ವಾಣಿ.
ಎಚ್ಚರ ತಪ್ಪಿದರೆ ಯಡಿಯೂರಪ್ಪನವರಂತೆ ನೀವೂ ಕಷ್ಟ ಅನುಭವಿಸುತ್ತೀರಿ.ಹೀಗಾಗಿ ಅವರಿಂದ ಅಂತರ ಕಾಯ್ದುಕೊಳ್ಳಿ ಎಂಬ ಅಡ್ವಾಣಿಯವರ ಉಪದೇಶವನ್ನು ಸದಾನಂದಗೌಡರು ಚಾಚೂ ತಪ್ಪದೆ ಪಾಲಿಸತೊಡಗಿದರು.
ಇದೇ ಕಾರಣಕ್ಕಾಗಿ ರಿಯಲ್ ಎಸ್ಟೇಟ್,ಗಣಿಗಾರಿಕೆಗೆ ಸಂಬಂಧಿಸಿದ ಯಾವ ಕಡತಗಳು ಬಂದರೂ ಎಚ್ಚರದಿಂದಿರುತ್ತಿದ್ದ ಸದಾನಂದಗೌಡರು,ಇದಕ್ಕೆಲ್ಲ ಕಣ್ಣು ಮುಚ್ಚಿ ಸಹಿ ಮಾಡಿದರೆ ನಾನೂ ಜೈಲಿಗೆ ಹೋಗುತ್ತೇನೆ ಅಂತೆಲ್ಲ ಗುರುಗುಡುತ್ತಿದ್ದರು.
ಕೊನೆ ಕೊನೆಗೆ ಇದು ಎಲ್ಲಿಯವರೆಗೆ ತಲುಪಿತೆಂದರೆ,ಯಡಿಯೂರಪ್ಪನವರು ಮಾಡಿಟ್ಟ ಕೊಳೆ ತೊಳೆಯುವುದೇ ನನಗೊಂದು ಕೆಲಸವಾಗಿದೆ ಅಂತ ಸದಾನಂದಗೌಡರು ಹೇಳುತ್ತಿದ್ದಾರೆ ಅಂತ ಆಪ್ತರ ಬಳಗ ಯಡಿಯೂರಪ್ಪ ಅವರೆದುರು ದೂರತೊಡಗಿತು.
ಈ ಬೆಳವಣಿಗೆ ಯಡಿಯೂರಪ್ಪ ಅವರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ ಗೌಡರನ್ನು ಕೆಳಗಿಳಿಸುವ ನಿರ್ಧಾರಕ್ಕೆ ಬರುವಂತೆ ಮಾಡಿತು.
ಆದರೆ ಈ ವಿಷಯದಲ್ಲಿ ಬೊಮ್ಮಾಯಿ ತದ್ವಿರುದ್ಧ.ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಬರುವ ಸಲಹೆಗಳನ್ನು ಅವರು ತಿರಸ್ಕರಿಸುವುದಿಲ್ಲ.ಹಾಗಂತ ಯಡ್ಡಿ ಬಳಗದ ಕೋರಿಕೆಗೆ ಕಣ್ಣು ಮುಚ್ಚಿ ಒಪ್ಪಿಗೆ ನೀಡುವುದೂ ಇಲ್ಲ.ಯಾವ ಕಡತಕ್ಕೆ ಸಹಿ ಹಾಕಿದರೆ ಏನಾಗಬಹುದು ಅಂತ ಅವರಿಗೆ ಗೊತ್ತಲ್ಲ?ಹೀಗಾಗಿ ಆ ಬಗ್ಗೆ ಪ್ರಸ್ತಾಪ ಬಂದರೆ ಜಾಣ ಮೌನಕ್ಕೆ ಜಾರಿ ಬಿಡುತ್ತಾರೆ.ಅವರ ಈ ನಡೆ ಯಡಿಯೂರಪ್ಪ ಅವರಿಗೆ ಕಿರಿ ಕಿರಿ ಮಾಡುತ್ತಿದೆ.ಆದರೆ ಹಾಗಂತ ತಿರುಗಿ ಬಿದ್ದು ಗುರುಗುಡುವ ಸ್ಥಿತಿಯಲ್ಲಿ ಅವರಿಲ್ಲ.ಅದೇ ರೀತಿ ತಿರುಗಿ ಬೀಳಲು ಅಗತ್ಯದ ವಾತಾವರಣವೂ ಇಲ್ಲ.
ಹಿಂದೆ ಸದಾನಂದಗೌಡರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಹೊರಟಾಗ ಅದನ್ನು ತಡೆಯುವ ಶಕ್ತಿ ಬಿಜೆಪಿ ವರಿಷ್ಟರಿಗಿರಲಿಲ್ಲ.ಆದರೆ ಈಗ ಮೋದಿ-ಅಮಿತ್ ಶಾ ನೇತೃತ್ವದ ಹೈಕಮಾಂಡ್ ಎಂತಹ ವಿರೋಧಿಗಳನ್ನೂ ಬಡಿದು ಬಾಯಿಗೆ ಹಾಕಿಕೊಳ್ಳುವಷ್ಟು ಬಲಿಷ್ಟವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣದಲ್ಲಿ ಯಡಿಯೂರಪ್ಪ ಯುಗ ಮುಗಿದಿದೆ.ಹೀಗಿರುವಾಗ ಅವರನ್ನು ನಂಬಿ ರಾಜಕಾರಣ ಮಾಡುವ ಮನ:ಸ್ಥಿತಿಯಿಂದ ಬಹುತೇಕರು ದೂರವಾಗಿದ್ದಾರೆ.ಅವರಿಗೀಗ ರಾಜ್ಯದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಯುಗ ಆರಂಭವಾಗುತ್ತದೆ ಎಂಬ ಸಣ್ಣ ನಂಬಿಕೆಯೂ ಇಲ್ಲ.
ಹೀಗಾಗಿ ಒಂದು ಕಾಲದಲ್ಲಿ ವಿಜಯೇಂದ್ರ ಬೆಳೆದು ನಿಲ್ಲಲು ದಾರಿ ಸಾಫ್ ಮಾಡುತ್ತೇನೆ ಎಂಬಂತೆ ನಡೆದುಕೊಳ್ಳುತ್ತಿದ್ದ ಬೊಮ್ಮಾಯಿ ಈಗ ವರಸೆ ಬದಲಿಸಿದ್ದಾರೆ.
ಅರ್ಥಾತ್,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನಾನೇ ಏಕೆ ಮರಳಿ ಸಿಎಂ ಆಗಬಾರದು?ಎಂದವರು ಕನಸು ಕಾಣುತ್ತಿದ್ದಾರೆ.
ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ರಾಮಕೃಷ್ಣ ಹೆಗಡೆ ಅವರ ನಂತರ ಸತತವಾಗಿ ಎರಡು ಬಾರಿ ಯಾರೂ ಮುಖ್ಯಮಂತ್ರಿಯಾಗಿಲ್ಲ
2008 ರಲ್ಲಿ ಜೆಡಿಎಸ್ ಬೆಂಬಲದಿಂದ ಕೆಲ ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತದ ನಂತರ ಮರಳಿ ಸಿಎಂ ಆಗಿದ್ದರಾದರೂ ಅದನ್ನು ಸತತ ಎರಡನೇ ಬಾರಿ ಎಂದು ಹೇಳುವುದು ಕಷ್ಟ.
ಯಾಕೆಂದರೆ ಮೊದಲ ಬಾರಿ ಮುಖ್ಯಮಂತ್ರಿಯಾದರೂ ಅವರು ಬಹುಮತ ಸಾಬೀತುಪಡಿಸದೆ ಕೆಳಗಿಳಿದಿದ್ದರು.
ಹೀಗಾಗಿ ಹೆಗಡೆ ಅವರು ಮೂವತ್ತೇಳು ವರ್ಷಗಳ ಹಿಂದೆ ಮಾಡಿದ ದಾಖಲೆಯನ್ನು ಮುರಿಯುವ ಕನಸು ಬೊಮ್ಮಾಯಿ ಅವರಲ್ಲಿ ಹುಟ್ಟಿಕೊಂಡಿದೆ.
ಅವರ ಕನಸಿನ ಗಿಡಕ್ಕೆ ಸಂಪುಟದಲ್ಲಿರುವ ಕೆಲವೊಂದು ಸಚಿವರೂ ನೀರೆರೆಯುತ್ತಿದ್ದಾರೆ.


ಅಂದ ಹಾಗೆ ಮೊನ್ನೆ ಹಿರಿಯ ಸಚಿವರೊಬ್ಬರು ಬೊಮ್ಮಾಯಿಯವರ ಬಗ್ಗೆ ತಾರೀಪು ಮಾಡುತ್ತಿದ್ದರು.
ಈ ಬೊಮ್ಮಾಯಿ ಇದಾರಲ್ಲ? ತುಂಬ ಡೀಪ್ ರೂಟೆಡ್.ಕರ್ನಾಟಕದಲ್ಲಿ ಜಾತಿ ರಸಾಯನಶಾಸ್ತ್ರದ ಮಾಸ್ಟರುಗಳಾದ ಅರಸು, ಹೆಗಡೆ ಮತ್ತು ದೇವೇಗೌಡರಿಗೆ ಮಿಕ್ಸಿಂಗ್ ಕೆಪ್ಯಾಸಿಟಿ ಇತ್ತಲ್ಲ? ಅದು ಇವರಲ್ಲೂ ಇದೆ.
ಹೀಗಾಗಿ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಿಸಿದರು.ಇನ್ನು ಕೆಲವೇ ದಿನಗಳಲ್ಲಿ ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಗೆ ಸೇರಿಸುತ್ತಾರೆ.
ಅದೇ ರೀತಿ ದಲಿತರಿಗೆ ಒಳಮೀಸಲಾತಿ ಕಲ್ಪಿಸಿಕೊಡಲು ಮುಂದಾಗಿರುವ ಬೊಮ್ಮಾಯಿಯವರು, ಮೀಸಲಾತಿ ಕೊಡುವಂತೆ ಒಕ್ಕಲಿಗರು ಮುಂದಿಟ್ಟ ಬೇಡಿಕೆಯನ್ನೂ ಈಡೇರಿಸುತ್ತಾರೆ.
ಆ ಮೂಲಕ ಮುಂದಿನ ವಿಧಾನಸಭೆ ಚುನಾವಣೆ ನಡೆಯುವುದರ ಒಳಗೆ ತಮ್ಮ ಇಮೇಜ್ ಮೇಲೆದ್ದು ನಿಲ್ಲುವಂತೆ ಮಾಡುತ್ತಾರೆ ಎಂಬುದು ಈ ಸಚಿವರ ತಾರೀಪು.
ಆದರೆ ವಾಸ್ತವದಲ್ಲಿ ಇದು ಹೇಗೆ ಸಾಧ್ಯ?ಅಂತ ಕೇಳಿದರೆ,ಅಲ್ಲಿಂದು ಇಲ್ಲಿಗೆ,ಇಲ್ಲಿಂದು ಅಲ್ಲಿಗೆ ಅನ್ನುವ ಸೂತ್ರ ಅನುಸರಿಸಿ ಬೊಮ್ಮಾಯಿ ಹೇಗೆ ದಕ್ಕಿಸಿಕೊಳ್ಳುತ್ತಾರೆ ಅಂತ ಮುಂದೆ ನೀವೇ ನೋಡುತ್ತೀರಿ ಅಂತ ಗಂಭೀರವಾಗಿ ಹೇಳುತ್ತಾರೆ.


ಈ ಮಧ್ಯೆ ಮುಂದಿನ ಚುನಾವಣೆಗೆ ಹೋಗಲು ಬಸವರಾಜ ಬೊಮ್ಮಾಯಿ ಗಿಫ್ಟ್-150 ಎಂಬ ಪ್ಲಾನು ರೆಡಿ ಮಾಡಿದ್ದಾರಂತೆ.
ಅದರ ಪ್ರಕಾರ,ಈಗಾಗಲೇ ನಿರ್ಧಾರವಾಗಿರುವ ನೂರೈವತ್ತು ವಿಧಾನಸಭಾ ಕ್ಷೇತ್ರಗಳಿಗೆ ಸಧ್ಯದಲ್ಲೇ ತಲಾ ನೂರು ಕೋಟಿ ರೂಪಾಯಿಗಳನ್ನು ಕೊಡುವುದು ಬೊಮ್ಮಾಯಿ ಯೋಚನೆ.
ಈ ಪೈಕಿ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಶಾಸಕರಿಂದ, ಸೋತ ಕ್ಷೇತ್ರಗಳಲ್ಲಿ ಪಕ್ಷದಿಂದ ಸ್ಪರ್ದೆ ಮಾಡುವ ಕ್ಯಾಂಡಿಡೇಡುಗಳಿಂದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ಕೊಡಿಸುವುದು ಅವರ ಉದ್ದೇಶ.
ಹೀಗೆ ಇತ್ತೀಚಿನ ದಿನಗಳಲ್ಲಿ ಬೊಮ್ಮಾಯಿ ಮಾಡುತ್ತಿರುವ ಎಲ್ಲ ಪ್ಲಾನುಗಳು ದಿನದಿಂದ ದಿನಕ್ಕೆ ಅವರ ಶಕ್ತಿಯನ್ನು ಹೆಚ್ಚಿಸುತ್ತಿವೆ.
ಯಡಿಯೂರಪ್ಪನವರು ಯಾವೆಲ್ಲ ಕಾರಣಗಳಿಂದ ಬೊಮ್ಮಾಯಿ ವಿಷಯದಲ್ಲಿ ಅಸಹಾಯಕರಾಗುತ್ತಿದ್ದಾರೆ ಎಂಬುದಕ್ಕೆ ಇದು ಕೂಡಾ ಸಾಕ್ಷಿ.

R T ವಿಠ್ಠಲಮೂರ್ತಿ ಮೂರ್ತಿ ಅವರ ಬರಹ

Exit mobile version