77 ವರ್ಷದ ವಯೋವೃದ್ದೆಗೆ ಆಪರೇಷನ್ ಇಲ್ಲದೆ ಟಾವಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದೇವೆ ಎಂದು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ವೈದ್ಯ ಡಾ.ಶ್ರೀವತ್ಸ ನಾಡಿಗ್ ತಿಳಿಸಿದರು.
ಅವರು ಇಂದು ಕಿಮ್ಮನೆ ಗಾಲ್ಪ್ ರೆಸಾರ್ಟ್‍ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಯೋವೃದ್ಧೆಯವರು ಕಳೆದ 3 ತಿಂಗಳಿಂದ ವಿಪರೀತ ಆಯಾಸ ಹಾಗೂ ನಡೆಯಲಾರದಷ್ಟು ಉಬ್ಬಸ, ಕಿಡ್ನಿ ಹಾಗೂ ಲಿವರ್ ತೊಂದರೆ ಸೇರಿದಂತೆ ಹಲವು ದಿನಗಳಿಂದ ಬಳಲುತ್ತಿದ್ದು, ಇವರ ದೇಹ ಸ್ಥಿತಿಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಚಿಕಿತ್ಸೆ ಮಾಡುವುದು ಅಸಾಧ್ಯವಾಗಿತ್ತು. ನಮ್ಮ ಆಸ್ಪತ್ರೆಗೆ ಬಂದು ಪರೀಕ್ಷಿಸಿದಾಗ ಟಾವಿ ಚಿಕಿತ್ಸೆ ಬಗ್ಗೆ ಸಲಹೆ ನೀಡಿದಾಗ ಚಿಕಿತ್ಸೆಗೆ ಒಪ್ಪಿಗೆ ನೀಡಿದಾಗ ವೈದ್ಯರ ತಂಡವು ರೋಗಿಗೆ ಟಾವಿ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.
ರಾಜ್ಯದ ಮಧ್ಯ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು, ಈ ಚಿಕಿತ್ಸೆಯಾದ ಕೇವಲ 2 ದಿನದಲ್ಲಿ ರೋಗಿಯು ಡಿಸ್ಚಾರ್ಜ್ ಆಗಿದ್ದಾರೆ. ಈಗ ರೋಗಿಯು ಓಡಾಡಿಕೊಂಡು ದಿನನಿತ್ಯದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ಹೃದಯದಲ್ಲಿ 4 ವಾಲ್ವ್‍ಗಳಿರುತ್ತವೆ. ಅಯೋರ್ಟಿಕ್ ವಾಲ್ವ್ ಎಂಬುದು ಎಡ ಹೃತ್ಕುರಣದಿಂದ ದೇಹದ ಮುಖ್ಯ ರಕ್ತನಾಳದ ಅಯೋರ್ಟ ಮಧ್ಯ ಏಕಮುಖ ಸಂಚಾರಕ್ಕೆ ರಕ್ತ ಸರಾಗವಾಗಿ ಹೊರಹೊಮ್ಮುವಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಮೇಲೆ ಹೇಳಿದ ಕಾರಣಗಳಿಂದ ಅಯೋರ್ಟಿಕ್ ವಾಲ್ವ್ ಸಂಕುಚಿತಗೊಳ್ಳಲಾರಂಭಿಸುತ್ತದೆ. ಈ ಕಾಯಿಲೆಗೆ ಅಯೋರ್ಟಿಕ್ ಸ್ಟೆನೋಸಿಸ್ ಹಾಗೂ ಸೋರಿಕೆ ಎಂದು ಕರೆಯುತ್ತಾರೆ. ಈ ಕಾಯಿಲೆ ಇರುವವರು ಕಡಿಮೆ ಸಂಖ್ಯೆಯಲ್ಲಿರುತ್ತಾರೆ ಎಂದರು.
ಇತ್ತೀಚಿನವರೆಗೂ ಈ ರೀತಿಯ ವಾಲ್ವ್ ತೊಂದರೆಗಳಿಗೆ ತೆರೆದ ಹೃದಯ ಚಿಕಿತ್ಸೆ ಮೂಲಕ ವಾಲ್ವ್‍ನ್ನು ಬದಲಾಯಿಸಿ ಲೋಹದ ಅಥವಾ ಜೈವಿಕ ವಾಲ್ವ್‍ಗಳನ್ನು ಅಳವಡಿಸಲಾಗುತ್ತಿತ್ತು. ಈ ಕಾಯಿಲೆಯು ವಯೋವೃದ್ಧದಲ್ಲಿ ಕಾಣುವ ಸಂಭವ ಹೆಚ್ಚಾಗಿರುವುದರಿಂದ ತೆರೆದ ಹೃದಯ ಚಿಕಿತ್ಸೆ ಅಪಾಯಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಗೆ ನೂತನ ಚಿಕಿತ್ಸೆ ಮಾಡಲಾಗುತ್ತಿದ್ದು, ರೋಗಿಗೆ ತೊಡೆಯ ರಕ್ತನಾಳದ ಮೂಲಕ ಕೃತಕವಾದ ಜೈವಿಕ ವಾಲ್ವ್‍ನ್ನು ಅಳವಡಿಸಲಾಗುತ್ತಿದ್ದು, ಈ ಚಿಕಿತ್ಸೆಯಿಂದ ತೆರೆದ ಹೃದಯದ ಚಿಕಿತ್ಸೆಯಿಂದ ಆಗುವ ತೊಂದರೆಗಳು ಇರುವುದಿಲ್ಲ ಎಂದರು.
ರಾಜ್ಯದಲ್ಲಿ ನಮ್ಮ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮಾತ್ರ ಟಾವಿ ಚಿಕಿತ್ಸೆ ವ್ಯವಸ್ಥೆಯಿದೆ. ಭಾರತೀಯರಲ್ಲಿ ವಯಸ್ಸಿನ ನಿರೀಕ್ಷೆ ಹೆಚ್ಚಿದಂತೆಲ್ಲಾ ಈ ಕಾಯಿಲೆ ಸವಾಲಾಗಿ ಪರಿಣಮಿಸಿದೆ. ರೋಗಿಯನ್ನು ಸಂಪೂರ್ಣವಾಗಿ ಸಾಯಲು ಬಿಡದೆ, ಬದುಕಲು ಬಿಡದೆ ನರಳಾಡಿಸುತ್ತದೆ. ಇಂತಹ ರೋಗಿಗೆ ಯಾವುದೇ ಆಪರೇಷನ್ ಇಲ್ಲದೆ ಅರವಳಿಕೆಯ ಅವಶ್ಯಕತೆ ಇಲ್ಲದೆ ಕೇವಲ ಒಂದು ಚಿಕ್ಕ ಸೂಜಿಯಿಂದ ಕೆಲಸ ಮುಗಿದು ಹೋಗುವ ಅಧ್ಬುತ ಚಿಕಿತ್ಸೆ ಇದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ.ಜಾನ್, ವೈದ್ಯಕೀಯ ನಿರೀಕ್ಷಕ ಡಾ.ಚಕ್ರವರ್ತಿ ಸಂಡೂರು, ಮ್ಯಾನೇಜಿಂಗ್ ವ್ಯವಸ್ಥಾಪಕ ಎಸ್.ವಿ.ರಾಜಸಿಂಗ್ ಉಪಸ್ಥಿತರಿದ್ದರು.