Site icon TUNGATARANGA

ಉಗ್ರರಿಗೆ ಬೆಂಬಲಿಸಿದ ಡಿಕೆ ಶಿವಕುಮಾರ್ ಬಿ.ಜೆ.ಪಿ ಆರೋಪ / ಪಾಕಿಸ್ತಾನ ವೀದೆಶಾಂಗ ಸಚಿವ ಬಿಲಾವಲ್ ಪ್ರತಿಕೃತಿಯನ್ನು ಸುಟ್ಟು ಭಸ್ಮ ಮಾಡಿದ ಬಿ.ಜೆ.ಪಿ ಮುಖಂಡರು

ಉಗ್ರರಿಗೆ ಬೆಂಬಲ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಬೇಕು ಮತ್ತು ಪಾಕಿಸ್ತಾನ ಸರ್ಕಾರದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.


ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಉಗ್ರ ಶಾರೀಕ್‌ನನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಮರ್ಥಿಸಿಕೊಂಡು ಉಗ್ರರಿಗೆ ಬೆಂಬಲ ಸೂಚಿಸಿ ಉಗ್ರವಾದಿ ಸಂಘಟನೆಗೆ ಪ್ರೋತ್ಸಾಹ ನೀಡಿದ್ದಾರೆ ಇಂತಹ ದೇಶದ್ರೋಹಿ ಹೇಳಿಕೆಗಳನ್ನು ಖಂಡಿಸಿದ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಶಾಸಕತ್ವವನ್ನು ರದ್ದು ಪಡಿಸಿ ಯುಎಪಿ ಆಕ್ಟ್‌ನಲ್ಲಿ ಇವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


ಪಾಕಿಸ್ತಾನ ಸರ್ಕಾರದ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ ಜರ್ದಾರಿ ದೇಶದ ಪ್ರಧಾನಿ ಹಾಗೂ ಅಭಿವೃದ್ಧಿಯ ಹರಿಕಾರರಾಗಿರುವ ಅವರನ್ನು ಟೀಕಿಸಿರುವುದಲ್ಲದೆ ಉಗ್ರ ಒಸಾಮಾ ಬಿನ್ ಲ್ಯಾಡನ್‌ಗೆ ಹೋಲಿಸಿದ್ದಾರೆ. ಇದು ಸರಿಯಲ್ಲ. ಸಮಸ್ತ ನಾಗರಿಕರ ಭಾವನೆಗೆ ಧಕ್ಕೆ ತಂದಿರುವುದನ್ನು ಜಿಲ್ಲ ಯುವ ಮೋರ್ಚ ಖಂಡಿಸುತ್ತದೆ. ಭಿಲಾವಲ್ ಭುಟ್ಟೋ ಜರ್ದಾರಿ ಪ್ರಧಾನಿಗಳ ಬಳಿ ಕ್ಷಮೆ ಯಾಚಿಸಬೇಕು.ಮತ್ತು ಜರ್ದಾರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ವಿಸ್ವ ಸಂಸ್ಥೆಗೆ ಶಿಫಾರಸು ಮಾಡಬೇಕು ಎಂದು ರಾಜ್ಯಪಾಲರಿಗೆ ಮಾಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ ಪ್ರತಿಕೃತಿಯನ್ನು ದಹಿಸಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಉಪಮೇಯರ್ ಲಕ್ಷ್ಮೀಶಂಕರನಾಯ್ಕ್, ಕೆ.ಈ. ಕಾಂತೇಶ್, ದತ್ತಾತ್ರಿ, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್.ಎನ್ ಚನ್ನಬಸಪ್ಪ, ಬಳ್ಳೆಕೆರೆ ಸಂತೋಷ್, ನಾಗರಾಜ್, ರುದ್ರೇಶ್,ರಾಮು, ಸುರೇಖಾ ಮುರಳೀಧರ್, ವಿಶ್ವನಾಥ್, ಉಮಾ, ಧೀರರಾಜ್ ಹೊನ್ನವಿಲೆ, ಮಾಲತೇಶ್, ಸುಹಾಸ್ ಶಾಸ್ತ್ರಿ, ಗಣೇಶ್ ಬಿಳಕಿ, ಅನೂಪ್ ಕುಮಾರ್, ಆರ್.ವಿ. ದರ್ಶನ್ ಮುಂತಾದವರಿದ್ದರು.

ಭಾಗವಹಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಿಂದಿನಿಂದಲೂ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಾ ಬಂದಿದೆ. ಗಲಭೆಗಳು ಆದಾಗ ಭಯೋತ್ಪಾದಕರ ಪರವಾಗಿ ಮತ್ತು ಉಗ್ರಚಟುವಟಿಕೆಗಳನ್ನು ನಡೆಸುತ್ತಿರುವವರ ಪರವಾಗಿ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಸಾಕ್ಷಿ ಸಮೇತ ಸಿಕ್ಕಿದ ಉಗ್ರನನ್ನು ಬೆಂಬಲಿಸುವ ಹೇಳಿಕೆ ನೀಡಿದೆ. ಕಾಶ್ಮೀರ ಭಯೋತ್ಪಾದಕರು ಮತ್ತು ಬಾಂಬೆ ಬ್ಲಾಸ್ಟ್ ನಡೆದಾಗಲೂ ಕೂಡ ಕಾಂಗ್ರೆಸ್ ಉಗ್ರರ ಪರವಾದ ಹೇಳಿಕೆಯನ್ನು ನೀಡಿತ್ತು. ಪಿಎಫ್‌ಐ ಮತ್ತು ಎಸ್‌ಡಿಪಿಐ ಬ್ಯಾನ್ ಮಾಡಬೇಕೆಂಬ ಒತ್ತಾಯ ಹೆಚ್ಚಿದಾಗ ಕೂಡ ಕಾಂಗ್ರೆಸ್ ನಿರಂತರವಾಗಿ ಯಾರೂ ಈ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೋ ಅವರ ಪರವಾಗಿಯೇ ಹೇಳಿಕೆ ನೀಡುತ್ತಾ ಬಂದಿತ್ತು. ನ್ಯಾಯಾಲಯ ಕೂಡ ಪಿಎಫ್‌ಐ ಬ್ಯಾನ್ ಮಾಡಿದ್ದು ಸರಿಯಿದೆ ಎಂದು ಹೇಳಿದಾಗಲೂ ಕಾಂಗ್ರೆಸ್ ಪಿಎಫ್‌ಐ ಪರ ಬ್ಯಾಟಿಂಗ್ ಮಾಡುತ್ತಾ ಬಂದಿದೆ. ಹೀಗೆ ಮುಂದುವರೆದರೆ ಮುಂದೆ ಸರ್ಕಾರ ಮತ್ತು ಜನ ಕಾಂಗ್ರೆಸ್‌ನ್ನೇ ಬ್ಯಾನ್ ಮಾಡುತ್ತಾರೆ. ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತು ದೇಶದ್ರೋಹಿಗಳ ಪರ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.

Exit mobile version