Site icon TUNGATARANGA

ಡಿ. 18 ರಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಜನ್ಮದಿನದ ಪ್ರಯುಕ್ತ ಸೈನ್ಸ್ ಮೈದಾನದಲ್ಲಿ ಉಚಿತ ಆರೋಗ್ಯ ತಪಾಸಣೆ: ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಡಿ. 18 ರಂದು ಸೈನ್ಸ್ ಮೈದಾನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋನಿಯಾ ಗಾಂಧಿ ಅವರು 20 ವರ್ಷಗಳ ಪಕ್ಷದ ಅಧ್ಯಕ್ಷರಾಗಿ ದುಡಿದಿದ್ದಾರೆ. ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಡವರ ಕಣ್ಮಣಿಯಾಗಿದ್ದಾರೆ. ಇವರ ತತ್ವ, ಸಿದ್ಧಾಂತಗಳನ್ನು ಎಲ್ಲಾ ಕಾಂಗ್ರೆಸ್ ನಾಯಕರು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಸೋನಿಯಾ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಡಿ. 18 ರಂದು ಬೆಳಗ್ಗೆ ಸರ್ಕಾರಿ ಪಿಯು ಕಾಲೇಜಿನ ಸೈನ್ಸ್ ಮೈದಾನದಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಆಯೋಜಿಸಲಾಗಿದೆ. ಇದರ ನೇತೃತ್ವವನ್ನು ವೈದ್ಯರ ಘಟಕದ ಅಧ್ಯಕ್ಷ ಡಾ. ಪ್ರದೀಪ್ ಡಿಮೆಲ್ಲೋ ವಹಿಸಲಿದ್ದು, ನಗರದ ಪ್ರತಿಷ್ಠಿತ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ, ಮಲ್ನಾಡ್ ಆಸ್ಪತ್ರೆ, ಹೈಲೆಟ್ಸ್ ಡಯಾಬಿಟಿಸ್ ಆಸ್ಪತ್ರೆ, ಶರಾವತಿ ಡೆಂಟಲ್ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿದೆ. ನುರಿತ ವೈದ್ಯರು ತಪಾಸಣೆ ನಡೆಸುವರು ಎಂದರು.

ಹೃದಯ ಸಂಬಂಧಿತ ಕಾಯಿಲೆಗಳು, ಮೂಳೆ ತೊಂದರೆ, ಕಣ್ಣಿನ ತಪಾಸಣೆ, ನರರೋಗ, ಸ್ತ್ರೀ ರೋಗ, ಚರ್ಮ ರೋಗ, ಮಧುಮೇಹ, ಮೂಗು, ಗಂಟಲು, ದಂತ ವೈದ್ಯಕೀಯ ಮುಂತಾದ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಇದರ ಜೊತೆಗೆ ರಕ್ತದಾನ ಶಿಬಿರ ಕೂಡ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಮಾಹಿತಿಗಾಗಿ ಮೊ. 99457 11779, 94834 81797 ಸಂಪರ್ಕಿಸಬಹುದಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ 100 ದಿನ ಪೂರ್ಣಗೊಳಿಸಿ ಯಶಸ್ವಿಯಾಗಿರುವುದಕ್ಕೆ ರಾಹುಲ್ ಗಾಂಧಿ ಅವರಿಗೆ ಅಭಿನಂದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೆಹಖ್ ಶರೀಫ್, ಟಿ. ಕೃಷ್ಣಪ್ಪ, ಡಾ. ಪ್ರದೀಪ್ ಡಿಮೆಲ್ಲೋ, ಚಂದನ್, ಚಂದ್ರಶೇಖರ್, ತಿಮ್ಮರಾಜ್, ಕಲೀಂ ಪಾಷ ಇದ್ದರು.

Exit mobile version