Site icon TUNGATARANGA

2 ಕೋಟಿ ರೂ.ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರಿಂದ ಚಾಲನೆ


ಶಿವಮೊಗ್ಗ

: ಪ್ರತಿ ವರ್ಷ ಮಳೆಗಾಲದಲ್ಲಿ ಮಳೆಯಿಂದ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಗೊಂಡು ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದ್ದ ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್, ಹಸೂಡಿ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶ ಸೇರಿದಂತೆ ರೂ.೨.೦೦ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಚಿವ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಚಾಲನೆ ನೀಡಿದರು.


ಅವರು ಇಂದು ನಗರದ ಶಾಂತಮ್ಮ ಲೇಔಟ್‌ನ ರಾಜಾಕಾಲುವೆಗೆ ಹೊಂದಿಕೊಂಡಂತಿರುವ ನಿವೇಶನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಹರಿಗೆ ಕೆರೆಯಿಂದ ಹೋಗುವ ಕೋಡಿಹಳ್ಳವು ಮಳೆಗಾಲದಲ್ಲಿ ಪ್ರತಿ ವರ್ಷ ಹಸೂಡಿ ರಸ್ತೆ ಬಳಿ ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲ ಜನವಸತಿ ಪ್ರದೇಶಕ್ಕೆ ನುಗ್ಗಿ ಅಪಾರ ಹಾನಿ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ತಜ್ಞ ಅಭಿಯಂತರರನ್ನು ವೀಕ್ಷಣೆಗೆ ಕಳಿಸಿ, ಅವರಿಂದ ವರದಿ ಪಡೆದು, ಸಮಸ್ಯೆಯ ಪರಿಹಾರ ಕ್ರಮವಾಗಿ ಮೊದಲ ಹಂತದಲ್ಲಿ ೨.೦೦ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಸದಸ್ಯ ಚನ್ನಬಸಪ್ಪ ಅವರು ಮಾತನಾಡಿ, ಮಳೆಹಾನಿಯಿಂದ ಸದರಿ ಪ್ರದೇಶವನ್ನು ಸಂರಕ್ಷಿಸಲು ಈ ಯೋಜನೆ ಸಹಕಾರಿಯಾಗಿದ್ದು, ಈ ಅನುದಾನ ಕೊಡಿಸುವಲ್ಲಿ ಸಹಕರಿಸಿದ ಮಾನ್ಯ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದ ಅವರು, ಬಾಕಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.


ಪ್ರಸ್ತುತ ಅನುದಾನದಲ್ಲಿ ಹಸೂಡಿ ರಸ್ತೆಯ ಬಳಿ ಕೋಡಿಹಳ್ಳವನ್ನು ಪೂಜಾರಿ ಕೆರೆಗೆ ತಲುಪುವಂತೆ ಕಾಲುವೆ ನಿರ್ಮಿಸುವುದು ಹಾಗೂ ಪೂಜಾರಿ ಕಟ್ಟೆ ಕೆರೆಯ ಹೂಳು ಜಂಗಲ್‌ನಿಂದ ತುಂಬಿದ್ದು, ಜನವಸತಿ ಪ್ರದೇಶದ ನಡುವೆ ಇರುವುದರಿಂದ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.


ಪೂಜಾರಿಕಟ್ಟೆಯಿಂದ ಹೆಚ್ಚುವರಿ ನೀರು ತುಂಗಾ ಎಡದಂಡೆ ಕಾಲುವೆಗೆ ತಲುಪುವಂತೆ ಕಾಲುವೆ ನಿರ್ಮಿಸಿ ಕಾಲುವೆ ಹೆಚ್ಚುವರಿ ನೀರು ಪುರಲೆಕೆರೆಗೆ ಸೇರುವಂತೆ ಮಾಡುವ ಅಗತ್ಯವಿದೆ. ಹಸೂಡಿ ರಸ್ತೆ ಬಳಿ ಕಾಸ್‌ವೇ ನಿರ್ಮಿಸುವುದರ ಮೂಲಕ ಸ್ಥಳೀಯ ರೈತರಿಗೆ ಅಚ್ಚುಕಟ್ಟು ಪ್ರದೇಶಕ್ಕೆ ತೆರಳಲು ಅನುಕೂಲವಾಗುವುದರ ಜೊತೆಗೆ ಕೋಡಿ ನೀರು ಜನವಸತಿ ಪ್ರದೇಶ ತಲುಪುವುದನ್ನು ತಪ್ಪಿಸಬಹುದಾಗಿದೆ ಎಂದವರು ನುಡಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾನಗರಪಾಲಿಕೆ ಕಾರ್ಪೋರೇಟರ್ ಶ್ರೀಮತಿ ಯಮುನಾ ರಂಗೇಗೌಡ ಅವರು ಮಾತನಾಡಿ, ಪ್ರತಿ ವರ್ಷ ಮಳೆಗಾಲದಲ್ಲಿ ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನಜೀವನ ನಡೆಸುವುದೇ ದುಸ್ತರವಾಗಿತ್ತು. ಪ್ರಸ್ತುತ ಈ ಯೋಜನೆಯ ಅನುಷ್ಠಾನದಿಂದಾಗಿ ಈ ಭಾಗದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಕಾರಣರಾದ ಮಾನ್ಯ ಶಾಸಕರಿಗೆ ಇಲ್ಲಿನ ನಿವಾಸಿಗಳ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮೇಯರ್ ಶಿವಕುಮಾರ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ನಾಗರಾಜ್, ಮೋಹನರೆಡ್ಡಿ, ಪ್ರಭಾಕರ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Exit mobile version