Site icon TUNGATARANGA

ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಬೆಳಗಾವಿ ಸುವರ್ಣ ಸೌಧದ ಎದುರು ಡಿ.20 ರಂದು ರೈತರ ಬೃಹತ್ ಸಮಾವೇಶ: ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಬೆಳಗಾವಿ ಸುವರ್ಣ ಸೌಧದ ಎದುರು ಡಿ.೨೦ರಂದು ಬೆಳಿಗ್ಗೆ ೧೦ ಗಂಟೆಗೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕಬ್ಬಿಗೆ ಮೋಸದ ಬೆಲೆ ನಿಗದಿಮಾಡಿದೆ. ೫ ವರ್ಷದ ಹಿಂದಿನ ಬೆಲೆಯನ್ನೇ ಎಫ್‌ಆರ್‌ಪಿಯನ್ನೇ ಗಣನೆಗೆ ತೆಗೆದುಕೊಂಡಿದೆ. ರೈತರ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಇನ್ನೂ ಉಳಿದಿದೆ. ರೈತರು ಚಳುವಳಿ ಮಾಡಿದರೂ ಸರ್ಕಾರ ಗಮನಹರಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂದರು.


ಇದರ ಜೊತೆಗೆ ಭತ್ತ, ರಾಗಿ, ಮೆಕ್ಕೆಜೋಳ,ತೊಗರಿ, ಕಡಲೆ, ಉದ್ದು, ಹೆಸರು, ಹತ್ತಿ, ಸೂರ್ಯಕಾಂತಿ, ಶೇಂಗಾ ಮುಂತಾದ ಬೆಳೆಗಳ ಬೆಲೆಯೂ ಕುಸಿದಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಭತ್ತಕ್ಕೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ೫೦೦ ರೂ. ಪ್ರೋತ್ಸಾಹ ಧನವಿದೆ. ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಮತ್ತು ಹಾಲಿನ ಖರೀದಿ ದರವನ್ನು ಹೆಚ್ಚಿಸಬೇಕು. ಎಸ್‌ಸಿ, ಎಸ್‌ಟಿಗೆ ಮಾತ್ರವಲ್ಲದೆ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೂ ಉಚಿತ ವಿದ್ಯುತ್ ನೀಡಬೇಕು ಎಂದರು.


ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಭೂತಾನ್‌ನಿಂದ ಅಡಿಕೆ ಆಮದನ್ನು ನಿಲ್ಲಿಸಬೇಕು. ಕಳ್ಳ ಸಾಗಾಣಿಕೆ ತಡೆಗಟ್ಟಬೇಕು. ಎಲೆ ಚುಕ್ಕಿ, ಹಳದಿ ಎಲೆ, ಮುಂತಾದ ರೋಗಗಳಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಗಿದ್ದು, ಕೂಡಲೆ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ರೈತವಿರೋಧಿ ಮೂರು ಕೃಷಿ ಕಾಯಿದೆಗಳನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸಿದರು.


ತೆಲಂಗಾಣ, ಪಂಜಾಬ್ ಮತ್ತು ದೆಹಲಿಯ ಸರ್ಕಾರಗಳು ರೈತರಿಗೆ ವಿಶೇಷ ಸವಲತ್ತುಗಳನ್ನು ನೀಡುತ್ತಿವೆ. ರಾಜ್ಯಸರ್ಕಾರ ಕೂಡ ಅದೇ ರೀತಿಯ ಸೌಲಭ್ಯಗಳನ್ನು ರೈತರಿಗೆ ನೀಡಬೇಕು. ನೆರೆ ಸಂತ್ರಸ್ತರಿಗೆ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಮುಖ್ಯವಾಗಿ ಬ್ಯಾಂಕುಗಳು ರೈತರ ಆಸ್ತಿ ಜಪ್ರಿ ಹರಾಜನ್ನು ಆನ್‌ಲೈನ್ ಮೂಲಕ ಮಾಡುತ್ತಿವೆ. ಮುಖ್ಯಮಂತ್ರಿಗಳು ಇದನ್ನು ರದ್ದುಮಾಡಿ ಕಾನೂನು ತರುವುದಾಗಿ ಹೇಳಿದ್ದಾರೆ. ಈ ಚಳಿಗಾಲದ ಅಧಿವೇಶನದಲ್ಲಿಯೇ ಅದನ್ನು ತರಬೇಕು ಎಂದರು.
ಈ ಎಲ್ಲಾ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಈ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಸುಮಾರು ೫ಸಾವಿರ ರೈತರು ಸೇರುವ ನಿರೀಕ್ಷೆ ಇದೆ. ಜಿಲ್ಲೆಯಿಂದಲು ಕೂಡ ೫೦೦ ಕ್ಕು ಹೆಚ್ಚು ಜನರು ಭಾಗವಹಿಸುತ್ತಾರೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ರೈತಸಂಘದಪದಾಧಿಕಾರಿಗಳಾದ ಎಸ್. ಶಿವಮೂರ್ತಿ, ಇ.ಬಿ. ಜಗದೀಶ್, ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಕೆ.ರಾಘವೇಂದ್ರ, ಕಸೆಟ್ಟಿ ರುದ್ರೇಶ, ಜಿ.ಎನ್. ಪಂಚಾಕ್ಷರಿ, ಜ್ಞಾನೇಶ್, ಸಿ. ಚಂದ್ರಪ್ಪ ಇದ್ದರು.

: ರೈತರ ಕಣ್ಮಣಿ ಎನ್.ಡಿ. ಸುಂದರೇಶ್ ಅವರ ನೆನಪಿನ ಸಭೆ ಹಾಗೂ ರಕ್ತದಾನ ಶಿಬಿರವನ್ನು ಡಿ.೨೨ರ ಬೆಳಿಗ್ಗೆ ೧೦ ಗಂಟೆಗೆ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ರೋಟರಿ ರಕ್ತನಿಧಿಯಲ್ಲಿ ಆಯೋಜಿಸಲಾಗಿದೆ.
ಎನ್.ಡಿ. ಸುಂದರೇಶ್ ಅವರು ರೈತಸಂಘದ ಸಂಸ್ಥಾಪಕರಾಗಿದ್ದರು. ರೈತರಿಗೆ ನ್ಯಾಯ ಒದಗಿಸಲು ದುಡಿದವರು. ಇವರ ೩೦ನೇ ನೆನಪಿನ ಸಭೆಯ ಅಂಗವಾಗಿ ಮತ್ತು ರಾಜ್ಯಸರ್ಕಾರ ತಂದಿರುವ ರೈತವಿರೋಧಿ ಕಾಯಿದೆಗಳನ್ನು ವಾಪಾಸು ಪಡೆಯಲು ಆಗ್ರಹಿಸಿ ಈ ಸಭೆ ಆಯೋಜಿಸಲಾಗಿದೆ ಇದರ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮತ್ತ ರಕ್ತದಾನ ಮಾಡುವವರು ೯೪೪೯೯ ೬೮೫೯೯, ೮೩೧೦೬ ೦೧೦೯೮ರಲ್ಲಿ ಸಂಪರ್ಕಿಸಬಹುದಾಗಿದೆ.

Exit mobile version