ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಅಭಿವೃದ್ದಿಗೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. ಅಂತೆಯೇ ಕಳೆದ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ನೀಡಿದ ಭರವಸೆಯಂತೆ ಹೊಸನಗರಕ್ಕೆ ಹೊಸ ರೂಪ ತರುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದು, ಮೊದಲ ಹಂತದಲ್ಲಿ ನಗರೋತ್ಥಾನ-೪ರ ರೂ ೪.೨೫ಕೋಟಿ ಅನುದಾನದ ವಿವಿಧ ಕಾಮಗಾರಿ ಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಪಟ್ಟಣ ಪಂಚಾಯತಿಯ ನಗರೋತ್ಥಾನ ಹಂತ ೪ರ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಸಮಗ್ರ ಅಭಿವೃದ್ದಿಗೆ ತಾವು ಬದ್ದರಾಗಿದ್ದು, ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುತ್ತೇನೆ. ಹಾಲಿ ಅನುಮೋದನೆ ಗೊಂಡಿರುವ ಕಾಮಗಾರಿಗಳ ತ್ವರಿತ ಅನುಷ್ಠಾನ ಹಾಗೂ ಪ್ರತಿ ವಾರ್ಡ್‌ನಲ್ಲಿ ಆಗಬೇಕಾಗಿರುವ ಕಾಮಗಾರಿ ಕುರಿತು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಚಿಂತಿಸಲಾಗಿದೆ ಎಂದರು.
ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಸೇರಿದಂತೆ, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂ ೩.೫ ಕೋಟಿ, ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ರೂ ೧ ಕೋಟಿ ಹಾಗೂ ತಾಲೂಕಿನ ಹಲವರು ಹಳ್ಳಿಗಳಿಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ವಿರೋಧಿಗಳ ಟೀಕೆಗೆ ತಾವು ಎಂದೂ ಕಿವಿಗೊಂಡುವುದಿಲ್ಲ ಎಂದ ಅವರು, ಕ್ಷೇತ್ರದ ಅಭಿವೃದ್ದಿಯೇ ನಮ್ಮ ಮೊದಲ ಗುರಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಕುರಿತು ತಾವು ಯಾವುದೇ ಕ್ಷಣದಲ್ಲೂ ಬಹಿರಂಗ ಚರ್ಚೆಗೆ ಸಿದ್ದನಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್. ದೇವಾ ನಂದ್, ಪ.ಪಂ. ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷೆ ಕೃಷ್ಣವೇಣಿ, ಗುರುರಾಜ್ ಇತರರಿದ್ದರು.