Site icon TUNGATARANGA

ಶಿವಮೊಗ್ಗ/ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಶಿವಕುಮಾರ್ ಬಿ ಲಕ್ಕೋಳ್ ಭೇಟಿ – 2023 ನೇ ಸಾಲಿನ ಕಾಲೆಂಡರ್ ಬಿಡುಗಡೆ

ಶಿವಮೊಗ್ಗ :

ಸಮರ್ಪಣಾ ಭಾವದಿಂದ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಮನೋಭಾವವನ್ನು ಎಲ್ಲ ವೈದ್ಯರು ಹೊಂದಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ಶಿವಕುಮಾರ್ ಬಿ ಲಕ್ಕೋಳ್ ಹೇಳಿದರು.
ಶಿವಮೊಗ್ಗ ನಗರದಲ್ಲಿರುವ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಗೆ ಭೇಟಿ ಹಾಗೂ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸೇವೆ ಮಾಡುವ ಆಶಯದಿಂದ ಕಾರ್ಯಕ್ರಮಗಳನ್ನು ರೂಪಿಸಬೇಕು. ಎಲ್ಲರೂ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬೇಕು ಎಂದು ತಿಳಿಸಿದರು.


ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಗಳಲ್ಲಿ ಶಿವಮೊಗ್ಗ ಶಾಖೆಯು ಪ್ರತಿಷ್ಠಿತ ಶಾಖೆಯಾಗಿ ಗುರುತಿಸಲ್ಪಟ್ಟಿದೆ. ರಾಜ್ಯದಲ್ಲಿರುವ ಎಲ್ಲ ಶಾಖೆಗಳಿಗಿಂತ ಹೆಚ್ಚು ಕೊಡುಗೆಯನ್ನು ಶಿವಮೊಗ್ಗ ನೀಡಿದೆ. ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೂ ಶಿವಮೊಗ್ಗ ವೈದ್ಯ ಸಾಹಿತಿಗಳ ಕೊಡುಗೆ ಅಪಾರ. ಕ್ರೀಡೆ ಹಾಗೂ ಸೇವಾ ಕ್ಷೇತ್ರದಲ್ಲಿಯೂ ಶಿವಮೊಗ್ಗ ವೈದ್ಯರು ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಸದಸ್ಯರು 26 ಸಾವಿರಕ್ಕಿಂತ ಹೆಚ್ಚು ಇದ್ದು, ಶಿವಮೊಗ್ಗ ಶಾಖೆಯಲ್ಲಿ ವೈದ್ಯ ಸದಸ್ಯರ ನೋಂದಣಿ ಹೆಚ್ಚಿಸಬೇಕು. ವೈದ್ಯಕೀಯ ಸಂಘದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಟ್ಟದಲ್ಲಿ ಈಡೇರಿಸಿಕೊಳ್ಳುವ ದೃಷ್ಠಿಯಿಂದ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯು ಸಂಪೂರ್ಣ ಪ್ರಯತ್ನ ನಡೆಸಲಿದೆ. ಎಲ್ಲ ಸದಸ್ಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಹೇಳಿದರು.
ವೈದ್ಯರ ಮೇಲೆ ಆಗುತ್ತಿರುವ ಹಲ್ಲೆ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯು ಆರೋಗ್ಯ ಇಲಾಖೆ ಸಚಿವರು ಹಾಗೂ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ವೈದ್ಯರ ಮೇಲಿನ ಹಲ್ಲೆ ಆರೋಪಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ತಿಳಿಸಿದರು.


ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಅರುಣ್ ಎಂ.ಎಸ್. ಹಾಗೂ ಕಾರ್ಯದರ್ಶಿ ರಕ್ಷಾ ಯು ರಾವ್ ಮಾತನಾಡಿ, ಶಿವಮೊಗ್ಗ ಶಾಖೆಯು ಸಾರ್ವಜನಿಕರಲ್ಲಿ ಆರೋಗ್ಯ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ರಕ್ತದಾನ ಶಿಬಿರ, ಆಶಾ ಕಾರ್ಯಕರ್ತರಿಗೆ ಆರೋಗ್ಯ ತಪಾಸಣೆ, ಮಹಿಳೆಯರಿಗೆ ಕ್ಯಾನ್ಸರ್ ಜಾಗೃತಿ, ಹಿರಿಯ ನಾಗರೀಕರಿಗೆ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಅನೇಕ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿವಮೊಗ್ಗ ಶಾಖೆಯು ಕಾರ್ಯ ಚಟುವಟಿಕೆಗಳನ್ನು ನಡೆಸುವ ಪ್ರಯತ್ನ ನಡೆದಿದೆ . ವೈದ್ಯರ ಸುರಕ್ಷತೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹಾಗೂ ಅಗತ್ಯ ಸಹಕಾರ ನೀಡುತ್ತ ಬರಲಾಗಿದೆ. ಐಎಂಎ ಶಿವಮೊಗ್ಗ ಸೇವಾ ಚಟುವಟಿಕೆಗಳ ಬಗ್ಗೆ ಮ್ಯಾಗಜೀನ್ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ 2023 ನೇ ಸಾಲಿನ ಕಾಲೆಂಡರ್ ಬಿಡುಗಡೆಮಾಡಲಾಯಿತು .
ಭಾರತೀಯ ವೈದ್ಯಕೀಯ ಸಂಘದ ಹಿರಿಯ ಸದಸ್ಯ ಡಾ. ಪಿ.ನಾರಾಯಣ, ಡಾ. ಲಕ್ಷ್ಮಣ್ ಬಾಕ್ಲೆ, ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಖಜಾಂಚಿ ಶಶಿಧರ್ , ಜಂಟಿ ಕಾರ್ಯದರ್ಶಿ ಡಾ. ಸತೀಶ್ ಎಂ.ಆರ್., ಹಿರಿಯ ವೈದ್ಯರಾದ ಡಾ . ಎನ್ . ಎಲ್ . ನಾಯಕ್ , ಡಾ . ನಾಗರಾಜ್ , ಡಾ . ಗೀತಾ ಇಸ್ಲೂರ್ , ಡಾ. ವಾಣಿ ಕೋರಿ ಮತ್ತಿತರರು ಉಪಸ್ಥಿತರಿದ್ದರು.

Exit mobile version