Site icon TUNGATARANGA

ಸಂಸ್ಕೃತಿ, ಸಂಸ್ಕಾರ ಪರಂಪರೆ ಪೋಷಿಸುವ ಸಂತ ”ಶ್ರೀ ಪ್ರಸನ್ನನಾಥ ಸ್ವಾಮೀಜಿ” ವರ್ಧಂತಿಯ ಶುಭಾಶಯಗಳೊಂದಿಗೆ ಮನದಾಳದ ಮಾತು: ಎಸ್.ಕೆ. ಗಜೇಂದ್ರಸ್ವಾಮಿ

ನಾನು ಎಂಬ ನನ್ನ ಪರ್ಸನಲ್ ಗೂಡೊಳಗೆ ನನ್ನನ್ನು ನಾನು ಇಣುಕಿ ನೋಡಿಕೊಂಡಾಗ ನನಗೆ ಕಾಣಿಸುವ ಗುರುಗಳಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಸನ್ನನಾಥ ಸ್ವಾಮೀಜಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ.


ಬರೋಬ್ಬರಿ ಇಪ್ಪತ್ತೈದು ವರ್ಷಗಳ ಹಿಂದೆ ನಾನು ಪತ್ರಿಕೋದ್ಯಮದ ಹಾದಿ ಹಿಡಿದು ಜನವಾರ್ತೆ ಪತ್ರಿಕೆಯಲ್ಲಿ ವರದಿಗಾರನಾಗಿ ಬಂದ ದಿನದಿಂದ ಹಿಡಿದು ಇಂದಿನವರೆಗೂ ನನ್ನನ್ನು ವೃತ್ತಿ ಹಾಗೂ ವೈಯುಕ್ತಿಕ ಬದುಕಿನ ಹಂತದಲ್ಲಿ ಅತ್ಯಂತ ಸೂಕ್ಷ್ಮವಾಗಿ ಪ್ರೀತಿಯ ಚಡಿಯೇಟಲ್ಲದ ಮಾತುಗಳಿಂದಲೇ ತಿದ್ದಿ ತೀಡುತ್ತಿರುವ ಗುರುಗಳಿವರು ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರೀಗಳ ಬಗ್ಗೆ ಹೇಳುವುದಕ್ಕೆ ಸಮುದ್ರದಷ್ಡು ವಿಷಯಗಳಿವೆ. ಅದರ ಬೊಗಸೆಯಷ್ಡನ್ನೂ ಯಾರು ಹೇಳಲಾರರು.


ಅಂದು ಪ್ರತಿದಿನ ಪತ್ರಿಕೆಯ ಕೆಲಸ ಮುಗಿದ ನಂತರ ಶಿವಮೊಗ್ಗದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುವುದು, ಸ್ವಾಮೀಜಿ ಜೊತೆ ಒಂದಿಷ್ಟು ಹೊತ್ತು ಮಾತನಾಡುವ ವಾಡಿಕೆಯ ಪರಿಪಾಠ ಸದ್ದಿಲ್ಲದೆ ನನ್ನೊಂದಿಗೆ ಬೆಳೆದದ್ದು ಯಾವುದೋ ಜನುಮದ ಪುಣ್ಯ ಎಂದುಕೊಳ್ಳುತ್ತೇನೆ. ಇಂದು ಒಂದು ಪತ್ರಿಕೆಯ ಸಂಪಾದಕನಾಗಿರಬಹುದು. ಆದರೆ ಅಂದಿನಿಂದ ಇಂದಿನವರೆಗೆ ನಾನು, ನನ್ನ ಬದುಕಿನ ಪ್ರತಿ ಹಾದಿಯಲ್ಲಿ ಬೆನ್ನು ತಟ್ಟಿ ಬೆಳಸಿದ ಶ್ರೀಗಳು ೨೦೦೫ರಲ್ಲಿ ನನ್ನ ಮೊಟ್ಟಮೊದಲ ಸಂಗ್ರಹದ ಪುಸ್ತಕ “ಸಿಹಿಮೊಗೆಯ ಯುವ ಸಿಂಚನ ಪುಸ್ತಕ” ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ನನ್ನ ಪೂಜ್ಯ ತಂದೆ ತಾಯಿಗಳಿಗೆ ಸನ್ಮಾನಿಸಿದ್ದನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಒಂದಿಷ್ಟೂ ಅವಸರ ಮಾಡದೇ ಅಂದು ಇಡೀ ದಿನ ತಮ್ಮದೇ ಕಾರ್ಯಕ್ರಮವೆಂಬಂತೆ ಶ್ರೀಗಳು ನಮ್ಮೊಂದಿಗಿದ್ದದ್ದು ಸೌಭಾಗ್ಯವೇ ಹೌದು. ಅಂದು ಸಚಿವ ಬಿ.ಸಿ. ಪಾಟೀಲ್, ರೈತನಾಯಕಿ ಚುಕ್ಕಿ ನಂಜುಂಡಸ್ವಾಮಿ ಬಾಗವಹಿಸಿದ್ದರು.


ಸಂಗೀತ, ಸಾಹಿತ್ಯದ ಜೊತೆಗೆ ನಾನು ಹಾಗೂ ನನ್ನ ಸ್ನೇಹಿತ ವೈಗ ಜಗದೀಶ್ ತಂಡ ಚಿಗುರು ಎಂಬ ಪ್ರೌಢಶಾಲಾ ಮಕ್ಕಳಿಗೆ ನೀಡುವ ಪುಸ್ತಕದ ಕುರಿತು ಶ್ರೀಗಳೊಂದಿಗೆ ಚರ್ಚಿಸಿದಾಗ ಅವರು ಶಿವಮೊಗ್ಗದ ಎಲ್ಲ ಖಾಸಗಿ ವಿದ್ಯಾ ಸಂಸ್ಥೆಗಳ ಪ್ರಮುಖರನ್ನು ಈಗಿರುವ ಕಾಲಭೈರವೇಶ್ವರ ದೇವಾಲಯ ಕಟ್ಟುವ ಪೂರ್ವದಲ್ಲಿ ಸಿದ್ದವಾಗುತ್ತಿದ್ದ ಕಟ್ಟಡದ ಒಳಾಂಗಣದಲ್ಲಿ ಕುಳ್ಳಿರಿಸಿ ನಮಗೆ ಬೆನ್ತಟ್ಟಿದ್ದನ್ನು ಮರೆಯಲು ಸಾಧ್ಯವೇ? ಆದಿಚುಂಚನಗಿರಿ ಶಾಖಾ ಮಠ ಆತ್ಮೀಯವಾಗಿ ನನ್ನನ್ನು ಪತ್ರಿಕಾ ರಂಗದ

ಅದರಲ್ಲೂ ಸಾಹಿತ್ಯದ ಆಸಕ್ತಿ ಉಳ್ಳಂತಹವರ ಜೊತೆಗಿದ್ದು ಬರೆಯಲು ನೀಡುತ್ತಿದ್ದ ಪ್ರೊತ್ಸಾಹದ ಕ್ಷಣಗಳು, ಉತ್ತೇಜನ ನೀಡುತ್ತಿರುವುದು ಹೆಮ್ಮೆಯ ವಿಚಾರ. ಅದು ಈಗಲೂ ಇದೆ.. ಅಂದು ದೈಹಿಕ ಶಾಲಾ ಶಿಕ್ಷಕರಿಗಿಂತ ಕ್ರೀಡೆಗಳಲ್ಲಿ ನಾನೊಂದು ಕೈ ಮೇಲು ಎಂಬಂತೆ ಕ್ರೀಡಾಂಗಣದಲ್ಲಿ ಕ್ರೀಡಾಪಟುವಾಗಿ, ಸಂಗೀತ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಸ್ಕೃತ ಭಾಷೆಯ ಕಲಿಕೆಯಲ್ಲಿ ತಮ್ಮತನವನ್ನು ಅತ್ಯಂತ ದಿಟ್ಟವಾಗಿ ಬಿತ್ತರಿಸುತ್ತಿದ್ದ ಶ್ರೀಗಳು ಸದಾ ಚಟುವಟಿಕೆಯಲ್ಲಿ ತೊಡಗುತ್ತಿರುವುದನ್ನು ಗಮನಿಸಿದಾಗ ಸಮಯ ಪ್ರಜ್ಞೆ ಎಂಬುದು ನಮಗೆ ಒಂದು ಮಾರ್ಗಸೂಚಿಯಾಗಿ ಇಲ್ಲಿ ನಿಲ್ಲುತ್ತದೆ.


ಅಂದಿನಿಂದ ಇಂದಿನವರೆಗೆ ಆದಿಚುಂಚನಗಿರಿ ಶಿವಮೊಗ್ಗ ಮಠ ಕ್ರೀಡೆ, ಸಂಗೀತ, ಭಾಷಣ ಮೊದಲಾದವುಗಳ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾವಳಿಗಳನ್ನು ಸಾವಿರಾರು ಕ್ರೀಡಾಪಟುಗಳಿಗೆ ದಾಸೋಹದ ಮೂಲಕ ಯಶಸ್ವಿಯಾಗಿ ನಡೆಸಿದಂತಹ ನೂರಾರು ನಿದರ್ಶನಗಳನ್ನು ಕಣ್ಣಾರೆ ಕಂಡಿದ್ದೇನೆ. ಆದಿಚುಂಚನಗಿರಿ ಶ್ರೀಗಳನ್ನು ಮುಂದಿಟ್ಟು ಕೊಂಡು ಯೋಚಿಸಿದಾಗ ಅವರಲ್ಲಿರುವ ಸರಳ, ಸಹಜ ಗುಣಗಳು ಅತ್ಯಂತ ಆಕರ್ಷಣೀಯವ ಗುತ್ತವೆ. ಅಂತೆಯೇ ಅವರ ಮೊನಚು ಕಾಣದ ಪ್ರೀತಿಯ ಮಾತುಗಳು

ನಿಜಕ್ಕೂ ಜೀವನದ ಒಂದು ದೊಡ್ಡ ಪಾಠವಾಗಿ ಬಿಡುತ್ತವೆ. ಒಮ್ಮೆ ಭದ್ರಾವತಿಯಿಂದ ಶಿವಮೊಗ್ಗಕ್ಕೆ ನನ್ನ ಬೈಕ್ ನಲ್ಲಿ ಬರುತ್ತಿದ್ದೆ. ಆಗ ಮೊಬೈಲ್ ನ ಬಳಕೆಯ ಆರಂಭದ ದಿನಗಳು ಹಾಗೆ ಮಾಚೇನಹಳ್ಳಿಯ ಸಮೀಪ ನಾನು ಬರುತ್ತಿದ್ದಾಗ ಕೈಯಲ್ಲೇ ಮೊಬೈಲ್ ಹಿಡಿದುಕೊಂಡಿದ್ದು ಕಿವಿಗೆ ಒತ್ತಿಟ್ಟುಕೊಂಡು ಮಾತನಾಡುತ್ತಾ ಬರುತ್ತಿದೆ. ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿದ್ದ ಶ್ರೀಗಳು ನನ್ನನ್ನು ಗಮನಿಸಿದರು. ನನ್ನ ಮೊದಲ ಮೊಬೈಲ್ ಮಾತುಕತೆ ಮುಗಿಯಿತು. ಜೇಬಿನಲ್ಲಿಟ್ಟುಕೊಂಡು ಮತ್ತೆ ವೇಗದಲ್ಲಿ ಹೋಗುತ್ತಿದ್ದೆ. ಮತ್ತೆ ಫೋನ್ ರಿಂಗಾಯಿತು. ಫೋನ್ ತೆಗೆದು ಕೊಂಡೆ. ಆದಿಚುಂಚನಗಿರಿ ಶ್ರೀಗಳು ಫೋನ್ ಮಾಡಿದ್ದಾರೆಂದು, ಮತ್ತದೇ ಶೈಲಿಯಲ್ಲಿ ಭುಜಕ್ಕೆ ಕಿವಿಯನ್ನು ಜೋಡಿಸಿ ಮೊಬೈಲ್ ಇಟ್ಕೊಂಡು ಮಾತನಾಡುತ್ತಾ ಹೋಗುತ್ತಿದ್ದೆ. ಎಲ್ಲಿದ್ದೀರಿ ಸ್ವಾಮಿಗಳು ಎಂದರು. ನಾನು ಸ್ವಾಮಿ ಅಲ್ಲ

ಗಜೇಂದ್ರ ಅಷ್ಟೇ ಎಂದು ನಗುತ್ತಲೇ ಮಾತನಾಡುತ್ತಾ ಹೋದೆ. ಎಲ್ಲಿದ್ದೀರಿ ಎಂದು ಮತ್ತೆ ಕೇಳಿದರು. ಸ್ವಾಮೀಜಿ ಈಗ ಆಫೀಸ್ ಹತ್ರ ಇದ್ದೇನೆ ಎಂದು ಮೊಬೈಲ್ನಲ್ಲಿ ಹುಟ್ಟಿಕೊಂಡಿದ್ದ ಸುಳ್ಳು ಹೇಳಿದೆ. ಇದು ಮಾಮೂಲಿ ಎಂದುಕೊಂಡೆ. ಕಾರಿನ ಚಾಲಕನಿಗೆ ಆದೇಶವಿತ್ತ ಶ್ರೀಗಳು ನನ್ನ ಬೈಕಿನ ಮುಂದೆ ಕಾರು ನಿಂತುಕೊಳ್ಳುವಂತೆ ಮಾಡಿದರು. ನಾನು ಬೆಪ್ಪಾಗಿ ಏನನ್ನು ಹೇಳಲ್ಲ. ನಾನು ಫೋನಲ್ಲಿ ಸುಳ್ಳು ಹೇಳಿದ್ದಕೆ ಈಗ ಕ್ಲಾಸ್ ತಗೋತಾರೆ ಎಂದುಕೊಂಡೆ. ಆದರೆ ಶ್ರೀಗಳು ಮೊಬೈಲ್ ಜೇಬಲ್ಲಿ ಇಟ್ಟುಕೊಳ್ಳಿ ಎಂದು ನಿಧಾನವಾಗಿ ಹೇಳಿ ನನ್ನನ್ನು ನಾನು ಯೋಚಿಸುವಂತೆ ಮಾಡಿದರು. ಹೆಚ್ಚೇನು ಮಾತನಾಡಲಿಲ್ಲ. ಪೋನ್ ಬಳಸುವಾಗ ನಿಂತುಕೊಂಡು ಮಾತಾಡಿ ಎಂದ್ರು. ನನ್ನಷ್ಟಕ್ಕೆ ನನ್ನ ನಾ ಬೈದುಕೊಂಡೆ. ಅಲ್ಲಿಂದ ಇಂದಿನವರೆಗೂ ನಾನು ವಾಹನದಲ್ಲಿ ಚಲಿಸುವಾಗ ಮೊಬೈಲ್ ಬಳಕೆ ಮಾಡುತ್ತಿಲ್ಲ. ಯಾವುದಾದರೂ ಫೋನ್ ರಿಂಗ್ ಆದರೆ ಸಾಕು ಅಲ್ಲಿ ಶ್ರೀಗಳ ಆ ಒಂದು ನೋಟ ಕಾಣಿಸುತ್ತದೆ.


ಅಂದು ಹೇಳಿದ ಒಂದು ಮಾತು ಇಂದಿಗೂ ನೆನಪಾಗುತ್ತದೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಅವರ ನೆನಪಿಗೆ. ಅವರ ಆಶೀರ್ವಾದ ಸದಾ ಇರಲಿ. ಶ್ರೀಗಳು ಈಗ ಆದಿಚುಂಚನಗಿರಿ ಮಹಾ ಸಂಸ್ಥಾನದ ಜವಾಬ್ದಾರಿಯೊಂದಿಗೆ ಶಿವಮೊಗ್ಗದ ಭೇಟಿ, ಅವರ ದರುಶನ ಕಡಿಮೆಯಾಗಿದೆ ಅಷ್ಟೇ. ಶ್ರೀಗಳು ಶಿವಮೊಗ್ಗದಲ್ಲಿ ಮಕ್ಕಳ ಬೆಳವಣಿಗೆಗೆ ಮಾಡಿದ ಸಕಲ ಭಾಗ್ಯಗಳು ರಾಜ್ಯದ ಎಲ್ಲಾ ಮಕ್ಕಳಿಗೂ ದಕ್ಕುತ್ತಿದೆ. ಅದು ಸಂತಸದ ವಿಚಾರವೇ ಹೌದು. ಈಗಲೂ ಸದಾ ಕ್ರಿಯಾಶೀಲತೆಯೊಂದಿಗೆಎಲ್ಲರಿಗೂ ಮಾದರಿಯಾಗಿರುವ ಶ್ರೀಗಳು ಯಾವುದೇ ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ನಡೆಯಲಿಲ್ಲ. ಪ್ರತಿಭೆ ಇರುವೆಡೆ ಶ್ರೀಗಳ ಪ್ರೋತ್ಸಾಹ ಸದಾ ಇದುತ್ತದೆ. ಜೈ ಗುರುದೇವ.

Exit mobile version