Site icon TUNGATARANGA

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ಇಂದು ಭಕ್ತರು ದೇವಾಲಯದ ಎದುರು ಪ್ರತಿಭಟನೆ ನಡೆಸಿದರು.

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿದ್ದ ಶ್ರೀ ಚೌಡೇಶ್ವರಿ ದೇವಾಲಯ ಪುರಾತನ ದೇವಾಲಯವಾಗಿದ್ದು, 1967 ರಲ್ಲಿ ಶ್ರೀಧರಸ್ವಾಮಿಗಳು ದೇವಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಇದು ಶಕ್ತಿ ದೇವತೆಯಾಗಿ ಊರನ್ನು ರಕ್ಷಣೆ ಮಾಡುತ್ತಿತ್ತು. ಆಸ್ಪತ್ರೆಗೆ ಬರುವ ಅಸಹಾಯಕರ ಪಾಲಿಗೆ ಅಮ್ಮನವರು ಅಭಯ ನೀಡುತ್ತಿದ್ದರು. ಇಲ್ಲಿ ಪ್ರಸಾದದ ವ್ಯವಸ್ಥೆಯೂ ನಡೆಯುತ್ತಿದೆ. ಇಂತಹ

ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ ಕೆ.ಎಸ್. ಈಶ್ವರಪ್ಪ ಅವರು ಇದನ್ನು ಕೆಡವಿದ್ದರು ಎಂದು ಆರೋಪಿಸಿದರು.

2019 ರಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಾರಂಭವಾಯಿತಾದರೂ ಇದುವರೆಗೂ ಇದರ ನಿರ್ಮಾಣ ಮುಂದುವರೆದಿಲ್ಲ. ಈಶ್ವರಪ್ಪ ತಮ್ಮನ್ನು ತಾವು ಹಿಂದೂ ಹುಲಿ ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ, ದೇವಸ್ಥಾನಗಳು, ಶ್ರದ್ಧಾಕೇಂದ್ರಗಳು ಹಾಳಾದರೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಶಾಸಕರಿಗೆ ಈ ದೇವಸ್ಥಾನಕ್ಕೆ ಅನುದಾನ ತರಲು ಸಾಧ್ಯವಾಗಿಲ್ಲ. ಆದ್ದರಿಂದ ತಕ್ಷಣವೇ ಈಶ್ವರಪ್ಪನವರು ಅಗತ್ಯ ಅನುದಾನ ತಂದು ದೇವಸ್ಥಾನ ನಿರ್ಮಾಣವನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್, ಶ್ಯಾಮ ಸುಂದರ್, ಜಿ.ಡಿ. ಮಂಜುನಾಥ್, ಶಿವಣ್ಣ, ಅಣ್ಣಪ್ಪ, ಸುನಿಲ್ ಗೌಡ, ದಯಾನಂದ, ಮಂಜುನಾಥ್, ಚಂದ್ರಶೇಖರ್, ಗೋಪಿ ಮೊದಲಿಯಾರ್, ನಿರ್ಮಲಾಕಾಶಿ ಹಾಗೂ ಭಕ್ತರು ಇದ್ದರು.

Exit mobile version