Site icon TUNGATARANGA

 ಬಿಜೆಪಿ ಕಣ್ಣಿಗೆ ಅಂಬೇಡ್ಕರ್ ನಂಜಾಗಿ ಕಾಣುತ್ತಿದ್ದಾರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪ

 ಬಿಜೆಪಿ ಕಣ್ಣಿಗೆ ಅಂಬೇಡ್ಕರ್ ನಂಜಾಗಿ ಕಾಣುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್ ಈ ದೇಶದ ಮಹಾನ್ ಮಾನವತಾವಾದಿ . ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾದವರಲ್ಲ. ಇಡೀ ದೇಶ ಇಂದು ನೆಮ್ಮದಿಯಾಗಿ ಜೀವಿಸುತ್ತಿದೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರೇ ಕಾರಣ ಎಂದರು.

ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ಇವೆಲ್ಲವೂ ಇಂದು ಬಿಜೆಪಿ ಇಂದು ನುಂಗಲಾರದ ತುತ್ತಾಗಿದೆ. ಇಂದು ಸಂವಿಧಾನವೇ ದುರುಪಯೋಗವಾಗುತ್ತಿದೆ. ಬಿಜೆಪಿ ನಾಯಕರು ಏನು ತಪ್ಪು ಮಾಡಿದರೂ ಪ್ರಶ್ನೆ ಮಾಡದಷ್ಟು ಚುನಾವಣಾ ಆಯೋಗ ದುರ್ಬಲವಾಗಿದೆ ಎಂದರು.

ಸಂವಿಧಾನವೇ ಬಿಜೆಪಿ ಕೈಗೆ ಸಿಕ್ಕು ಬಡುಮೇಲಾಗುತ್ತಿದೆ. ಅಂಬೇಡ್ಕರ್ ಅಂದೇ ಹೇಳಿದ್ದರು. ಸಂವಿಧಾನ ಎಲ್ಲಾ ದೇಶಕ್ಕೂ ಇರುತ್ತದೆ. ಆದರೆ, ಅದನ್ನು ಸಮರ್ಥವಾಗಿ ನಿರ್ವಹಿಸದಿದ್ದರೆ ಅಂತಹ ಸಂವಿಧಾನಕ್ಕೆ ಅರ್ಥವೇ ಇಲ್ಲ ಎಂದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಆಶಯಗಳೇ ನೆಲ ಕಚ್ಚಿವೆ ಎಂದರು.

ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಮಾತನಾಡಿ, ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು, ಸಮಾನತೆ ಹಾಗೂ ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಮಹಾನ್ ಸಾಧಕರು. ಅವರ ತತ್ವಗಳನ್ನು ಎಲ್ಲಾ ಪಕ್ಷಗಳು ಒಪ್ಪಿಕೊಳ್ಳಬೇಕು. ಆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಪ್ರಮುಖರಾದ ಬಲದೇವಕೃಷ್ಣ, ಹೆಚ್.ಎಂ. ಚಂದ್ರಶೇಖರಪ್ಪ, ಕೃಷ್ಣಪ್ಪ, ಹೆಚ್.ಸಿ. ಯೋಗೀಶ್, ಇಕ್ಬಾಲ್ ನೇತಾಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಸಿ.ಎಸ್. ಚಂದ್ರಭೂಪಾಲ್, ಮಂಜುನಾಥ ಬಾಬು, ಯು. ಶಿವಾನಂದ್, ಚಂದ್ರಶೇಖರ್, ಇಕ್ಕೇರಿ ರಮೇಶ್, ವಿನಾಯಕ ಮೂರ್ತಿ ಇದ್ದರು.

Exit mobile version