Site icon TUNGATARANGA

ಮೆಗ್ಗಾನ್ ನಲ್ಲಿ ಖಾಸಗಿ ವೈದ್ಯರ ಸೇವೆ: ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಸೆ.17:

ಕರೋನಾ ಪೀಡಿತರಿಗೆ ಚಿಕಿತ್ಸೆ ನೀಡಲು ಮೆಗ್ಗಾನ್ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಇಂದು ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿರುವ ಹೊಸ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದ ಬಳಿಕ ವೈದ್ಯಾಧಿಕಾರಿಗಳ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಪ್ರತಿದಿನ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೆಗ್ಗಾನ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮೆಗ್ಗಾನ್‍ನಲ್ಲಿ 390 ಆಕ್ಸಿಜನ್ ಬೆಡ್‍ಗಳು ಲಭ್ಯವಿದ್ದು, ಪ್ರಸ್ತುತ ಇರುವ ವೈದ್ಯಕೀಯ ಸಿಬ್ಬಂದಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಖಾಸಗಿ ನರ್ಸಿಂಗ್ ಹೋಂಗಳನ್ನು ಸಹ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಎಚ್ಚರಿಕೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಪ್ರಸ್ತುತ ನಾಲ್ಕು ಮಂದಿ ಖಾಸಗಿ ವೈದ್ಯರ ಸೇವೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಬಳಸಿಕೊಳ್ಳಲಾಗುತ್ತಿದೆ. ಆದರೆ ಕೆಲವು ವೈದ್ಯರು ಸೇವೆಯನ್ನು ನೀಡಲು ಹಿಂದೇಟು ಹಾಕುತ್ತಿದ್ದು, ಅಂತಹ ವೈದ್ಯರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಐಎಂಎ ಅಧ್ಯಕ್ಷ ಡಾ.ಪರಶುರಾಮ ಅವರು ಮಾತನಾಡಿ, ಖಾಸಗಿ ವೈದ್ಯರು ಮೆಗ್ಗಾನ್‍ನಲ್ಲಿ ಸೇವೆ ಸಲ್ಲಿಸಲು ಸಿದ್ದರಿದ್ದಾರೆ. ಅವರಿಗೆ ಕೆಲವು ಸೌಲಭ್ಯಗಳನ್ನು ಒದಗಿಸಿ ಕೊಡಬೇಕು. ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆ ಪ್ರೊಟೊಕಾಲ್ ಬಗ್ಗೆ ತರಬೇತಿ ನೀಡಬೇಕು. ಅವರಿಗೆ ಒಂದು ವಾರ ಸೇವೆ ಸಲ್ಲಿಸಿದ ಬಳಿಕ ಕ್ವಾರೆಂಟೈನ್ ವ್ಯವಸ್ಥೆ ಮಾಡಬೇಕು. ಸರ್ಕಾರಿ ವೈದ್ಯರಿಗೆ ಅನ್ವಯವಾಗುವ ವಿಮಾ ಸೌಲಭ್ಯವನ್ನು ಅವರಿಗೂ ಕಲ್ಪಿಸಬೇಕು. ಅವರಿಗೆ ಸೂಕ್ತ ಗೌರವಧನ ಹಾಗೂ ಕರೋನಾ ಪಾಸಿಟಿವ್ ಆದರೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಪ್ರಶಂಸೆ: ಮೆಗ್ಗಾನ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಎಲ್ಲಾ ಖಾಸಗಿ ವೈದ್ಯರು ಸಿದ್ಧರಿದ್ದು, ಈಗಾಗಲೇ ವೈದ್ಯರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರ ಸೇವೆ ಸಲ್ಲಿಸಿರುವ ಡಾ.ಶ್ರೀಕಾಂತ್ ಹೆಗಡೆ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ರೋಗಿಗಳಿಗೆ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಡಾ.ಧನಂಜಯ ಸರ್ಜಿ ಅವರು ಸಭೆಗೆ ತಿಳಿಸಿದರು.

ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಲಭ್ಯತೆ: ಪ್ರಸ್ತುತ ಶಿಕಾರಿಪುರ, ಸಾಗರ ಹಾಗೂ ಭಧ್ರಾವತಿ ತಾಲೂಕು ಆಸ್ಪತ್ರೆಗಳಲ್ಲಿ ತಲಾ 50 ಆಕ್ಸಿಜನ್ ಬೆಡ್‍ಗಳು ಲಭ್ಯವಿದೆ. ಆಯಾ ತಾಲೂಕುಗಳ ಕರೋನಾ ಪೀಡಿತರಿಗೆ ಅಲ್ಲಿಯೇ ಚಿಕಿತ್ಸೆ ಒದಗಿಸಬೇಕು. ಅಗತ್ಯ ಬಿದ್ದರೆ ಮಾತ್ರ ಮೆಗ್ಗಾನ್ ಆಸ್ಪತ್ರೆಗೆ ಅಲ್ಲಿನ ವೈದ್ಯರು ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಮೆಗ್ಗಾನ್ ನಿರ್ದೇಶಕ ಡಾ.ಸಿದ್ಧಪ್ಪ, ಡಾ. ಶ್ರೀಧರ್, ಆಡಳಿತ ಮಂಡಳಿ ಸದಸ್ಯರಾದ ಡಾ.ಗೌತಮ್, ದಿನಕರ ಶೆಟ್ಟಿ, ಡಾ.ವಾಣಿ ಕೋರಿ, ಐಎಂಎ ಕಾರ್ಯದರ್ಶಿ ಡಾ.ಶಂಭುಲಿಂಗ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version