Site icon TUNGATARANGA

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಎರಡು ಸ್ಥಳ ನಿಗಧಿ :ಡಿ.ಎಸ್.ವೀರಯ್ಯ… ಯಾವ ಜಾಗ ಗೊತ್ತಾ?


ಶಿವಮೊಗ್ಗ, ನ.25:

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ವ್ಯವಸ್ಥಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಎರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಥಳವನ್ನು ಅಂತಿಮಗೊಳಿಸಿದ ತಕ್ಷಣ ನಿರ್ಮಾಣ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದೇವರಾಜ ಅರಸು ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಕುರಿತಾಗಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ಲೀಪುರ ಸಮೀಪ ಕೆಐಎಡಿಬಿ ಜಮೀನು ಹಾಗೂ ಹರಿಗೆ ಬಳಿ ಜಮೀನು ಗುರುತಿಸಲಾಗಿದೆ. ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ 40ಎಕ್ರೆ ಸ್ಥಳದ ಅಗತ್ಯವಿದೆ. ಪ್ರತಿ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ 7ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಟ್ರಕ್ ಟರ್ಮಿನಲ್‍ನಲ್ಲಿ ಸುಮಾರು 500 ಟ್ರಕ್‍ಗಳು ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿ ತಂಗಲು ಡಾರ್ಮೆಟರಿ, ಕುಡಿಯುವ ನೀರು, ಶೌಚಾಲಯದಂತಹ ಅಗತ್ಯ ಸೌಲಭ್ಯಗಳು, ಪೊಲೀಸ್ ಚೌಕಿ, ಆರೋಗ್ಯ ಕೇಂದ್ರ, ಎಟಿಎಂ, ರೆಸ್ಟೋರೆಂಟ್‍ನಂತಹ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಿಂದ ಸ್ಥಳೀಯವಾಗಿ ಉದ್ಯೋಗವಕಾಶ ಸಹ ಸೃಷ್ಟಿಯಾಗಲಿದೆ ಎಂದು ಹೇಳಿದರು.


ಗತಿಶಕ್ತಿ ಯೋಜನೆ: ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಸ್ತೆ ಬದಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಕನಿಷ್ಟ 5ಎಕ್ರೆ ಜಮೀನು ಅಗತ್ಯವಿದ್ದು, ಜಿಲ್ಲೆಯಲ್ಲಿ ಎರಡು ಸ್ಥಳಗಳನ್ನು ಆದಷ್ಟು ಬೇಗನೆ ಗುರುತಿಸಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 13 ಮತ್ತು 206ರಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಪ್ರಯಾಣಿಕರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಈ ಯೋಜನೆಯಡಿ ಪ್ರಯಾಣಿಕರಿಗೆ ಶೌಚಾಲಯ, ಕುಡಿಯುವ ನೀರು, ರೆಸ್ಟೋರೆಂಟ್ ನಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಸೂಚನೆ: ಟ್ರಕ್ ಟರ್ಮಿನಲ್ ನಿರ್ಮಿಸಲು ಆದಷ್ಟು ಬೇಗನೆ ಸ್ಥಳವನ್ನು ಅಂತಿಮಗೊಳಿಸಿ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ವೀರಯ್ಯ ಅವರು ಸಭೆಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

ಸೂಡಾ ಮಾಜಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಡಿಯುಡಿಸಿ ಯೋಜನಾ ನಿರ್ದೇಶಕ ಕರಿಭೀಮಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


Exit mobile version