ಶಿವಮೊಗ್ಗ ನ. 22:
ಬಾಲ್ಯ ವಿವಾಹ ತಡೆ ಕುರಿತು ಸಮುದಾಯದಲಿ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಸಾರ್ವಜನಿಕರು ಸಹ ಬಾಲ್ಯ ವಿವಾಹ ತಡೆಯುವಲ್ಲಿ ಸಹಕರಿಸಬೇಕೆಂದು ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್(ಪ್ರ) ಗಣೇಶ್ ಹೇಳಿದರು.
ಇಂದು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಿವಮೊಗ್ಗ ತಾಲ್ಲೂಕು ಮಟ್ಟದ ವಿವಿಧ ಯೋಜನೆಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಊರು, ವಾಸಸ್ಥಳ ಸುತ್ತಮುತ್ತ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ಕೂಡಲೇ 1098 ಮಕ್ಕಳ ಸಹಾಯವಾಣಿ, ಪೊಲೀಸ್ ಅಥವಾ ಇನ್ನಾವುದೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಹಿತಿ ಮಾಹಿತಿ ನೀಡಬೇಕು.
ಜೊತೆಗೆ ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಗಳು ಹೆಚ್ಚೆಚ್ಚು ಆಗಬೇಕು ಎಂದ ಅವರು ಇತರೆ ವಿವಿಧ ಯೋಜನೆಗಳಡಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕೆಂದು ತಿಳಿಸಿದರು.
ವಲಯ ಮೇಲ್ವಿಚಾರಕಿ ಸುಮಂಗಳಾ ವಿವಿಧ ಯೋಜನೆಗಳ ವರದಿ ನೀಡಿ, 2020-21 ನೇ ಸಾಲಿನಿಂದ ಭಾಗ್ಯಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಅಂಚೆ ಇಲಾಖೆಯೊಂದಿಗೆ ವಿಲೀನಗೊಳಿಸಿ ಸುಕನ್ಯ ಸಮೃದ್ದಿ ಯೋಜನೆಯಡಿ ನೋಂದಾಯಿಸಲು ಸರ್ಕಾರ ಆದೇಶಿಸಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಜುಲೈನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 519 ಹೆಣ್ಣುಮಕ್ಕಳು ಜನಿಸಿದ್ದು ಇದರಲ್ಲಿ 349 ಬಿಪಿಎಲ್ ಕುಟುಂಬದ ಹೆಣ್ಣುಮಕ್ಕಳಿದ್ದಾರೆ. 417 ಭಾಗ್ಯಲಕ್ಷ್ಮಿ ಬಾಂಡ್‍ಗಳು ಬಂದಿವೆ. ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 25599 ಬಾಂಡ್ ಬಂದಿದ್ದು 1569 ಬಾಕಿ ಇದೆ ಎಂದರು.
ತಾಲ್ಲೂಕಿನಲ್ಲಿ ಒಟ್ಟು 825 ಸ್ತ್ರೀಶಕ್ತಿ ಗುಂಪುಗಳಿದ್ದು, 12473 ಮಹಿಳಾ ಸದಸ್ಯರಿದ್ದಾರೆ. ರೂ.75000 ಕ್ಕಿಂತ ಹೆಚ್ಚು ಉಳಿತಾಯ ಮಾಡಿದ ಒಟ್ಟು 68 ಗುಂಪುಗಳಿಗೆ ರೂ.15000/- ಪ್ರೋತ್ಸಾಹ ಧನ ನೀಡಲಾಗಿದೆ. ರೂ.1 ಲಕ್ಷಕ್ಕಿಂತ ಅಧಿಕ ಉಳಿತಾಯ ಮಾಡಿದ ಒಟ್ಟು 104 ಗುಂಪುಗಳಿಗೆ ರೂ.20,000/- ಪ್ರೋತ್ಸಾಹಧನ ನೀಡಲಾಗಿದೆ. ಆದಾಯೋತ್ಪನ್ನ ಚಟುವಟಿಕೆ ಕೈಗೊಂಡ ಒಟ್ಟು 175 ಗುಂಪುಗಳಿಗೆ ರೂ.5000/- ಪ್ರೋತ್ಸಾಹಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜುಲೈ ಮತ್ತು ಆಗಸ್ಟ್‍ನಲ್ಲಿ ಐದು ಬಾಲ್ಯ ವಿವಾಹ ಪ್ರಕರಣಗಳ ಪೈಕಿ ಮೂರು ಮದುವೆಗಳನ್ನು ತಡೆದು ಸೂಕ್ತ ಕ್ರಮ ವಹಿಸಲಾಗಿದೆ. ತಾಲ್ಲೂಕು ಮತ್ತು ಗ್ರಾಮ ಮಕ್ಕಳ ರಕ್ಷಣಾ ಸಮಿತಿಯಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಮಕ್ಕಳ ರಕ್ಷಣೆ, ಹಕ್ಕುಗಳು, ಸಂಕಷ್ಟ ಪರಿಸ್ಥಿತಿಯಲ್ಲಿರುವ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ, ಬಾಲ ಮಂದಿರಗಳ ಬಗ್ಗೆ, ಸಹಾಯವಾಣಿ, ಬಾಲ್ಯವಿವಾಹ, ಬಾಲಕಾರ್ಮಿಕ ವಿರೋಧ ಇತರೆ ವಿಷಯ ಕುರಿತು ಚರ್ಚಿಸಿ ಕ್ರಮ ವಹಿಸಲಾಗುತ್ತಿದೆ.
ನಿಯಮಿತವಾಗಿ ಕಾವಲು ಸಮಿತಿ ಸಭೆ ನಡೆಸಲಾಗುತ್ತಿದೆ. ತಾಲ್ಲೂಕಿನ 42 ಗ್ರಾ.ಪಂ ವ್ಯಾಪ್ತಿಯಲ್ಲಿ 0 ರಿಂದ 18 ವರ್ಷದ ಮಕ್ಕಳ ಸಂಖ್ಯೆ 33592 ಇದ್ದು 10821 ಮಕ್ಕಳು ಅಂಗನವಾಡಿಗೆ ದಾಖಲಾಗಿದ್ದಾರೆ. ಹಾಗೂ 39554 ಮಹಿಳೆಯರಿದ್ದು 33087 ದುಡಿಯುತ್ತಿರುವ ಮಹಿಳೆಯರಿದ್ದಾರೆ. ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದಡಿ ಸೆಪ್ಟೆಂಬರ್ ಅಂತ್ಯದವರೆಗೆ 384 ಸಭೆ/ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಸಂರಕ್ಷಣಾಧಿಕಾರಿ ನೂತನ್ ನಾಯ್ಕ್ ವರದಿ ನೀಡಿ, ತಾಲೂಕಿನಲ್ಲಿ 2022-23 ನೇ ಸಾಲಿನ ಜುಲೈ ಯಿಂದ ಸೆಪ್ಟೆಂಬರ್ ವರೆಗೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ-2005 ರಡಿ ಒಟ್ಟು 29 ಪ್ರಕರಣ ದಾಖಲಾಗಿದ್ದು, 25 ಪ್ರಕರಣ ಕೌನ್ಸಿಲಿಂಗ್ ಹಂತದಲ್ಲಿದೆ ಎಂದರು.
ಸಭೆಯಲ್ಲಿ ಶಿವಮೊಗ್ಗ ತಾಲ್ಲೂಕು ಸಿಡಿಪಿಓ ಚಂದ್ರಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ರಘುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಭರತ್, ಪ್ಯಾನೆಲ್ ವಕೀಲರು, ಸುರಭಿ ಸಂಸ್ಥೆ ಅಧಿಕಾರಿ, ಇತರೆ ಅಧಿಕಾರಿಗಳು ಇದ್ದರು.