Site icon TUNGATARANGA

ಇಂದಿರಾಗಾಂಧಿಯವರು ಬಡವರ ಬೆಳಕಾಗಿದ್ದರು: ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್

ಇಂದಿರಾಗಂಧಿಯವರು ಬಡವರ ಬೆಳಕಾಗಿದ್ದರು ಎಂದು ಜಿಲ್ಲಾ ಕಾಂಗೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.


ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಇಂದಿರಾ ಅವರು ೧೭ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದವರು. ಬಡವರ ದೀನದಲಿತರ ಹಿಂದುಳಿದ ವರ್ಗಗಳ ಅಪಾರ ಪ್ರೀತಿಯನ್ನು ಗಳಿಸಿದ್ದವರು. ಅವರ ಜನಪ್ರಿಯ ಕಾರ್ಯಕ್ರಮಗಳ ಕೊಡುಗೆಯ ರೂಪದಲ್ಲಿ ಇಂದಿಗೂ ಶೇ.೩೦ರಷ್ಟು ಮತಗಳು ಕಾಂಗ್ರೆಸ್ಸಿನ ಬುನಾದಿಯಾಗಿವೆ ಎಂದರು.


ಇಂದಿರಾಗಾಂಧಿಯವರು ತುರ್ತುಪರಿಸ್ಥತಿಯನ್ನು ತಂದವರು ಎಂದು ಬೊಬ್ಬೆ ಇಡುವ ಬಿಜೆಪಿಯವರ ಈಗ ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಇಂದು ಅಘೋಷಿತ ತುರ್ತು ಪರಿಸ್ತಿತಿ ದೇಶದಲ್ಲಿದ್ದು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಸೇರಿದಂತೆ ಅನೇಕ ನಾಯಕರನ್ನು ಮೂಲೆಗುಂಪಾಗಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದರು.


ಸಂವಿಧಾನಕ್ಕೆ ಅತ್ಯಂತ ಗೌರವ ನೀಡಿದ ಇಂದಿರಾ ಅವರು ಇಂದಿಗೂ, ಎಂದಿಗೂ ಶಾಶ್ವತವಾಗಿ ನಮ್ಮ ಮನದಲ್ಲಿ ಉಳಿಯುತ್ತಾರೆ. ಅವರ ಮೊಮ್ಮಗ ರಾಹುಲ್ ಅವರು ತಮ್ಮ ಅಜ್ಜಿಯ ನೆನಪಿನಲ್ಲಿಯೇ ಇಡೀ ದೇಶದ ತುಂಬ ಸುಮಾರು ೨ಸಾವಿರಕ್ಕೂ ಹೆಚ್ಚು ಕಿಮೀ. ಪಾದಯಾತ್ರೆ ಮಾಡುತ್ತಿದ್ದಾರೆ. ಹಲವು ತಲ್ಲಣಗಳ ನಡುವೆ ಕಾಂಗೆಸ್ ಮತ್ತೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು.


ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಮಾತನಾಡಿ, ಇಂದಿರಾಗಾಂಧಿ ಅನೇಕ ಯೋಜನೆಗಳನ್ನು ಜಾರಿಗೆ ತಂದವರು ಅವರ ೨೦ ಅಂಶದ ಕಾರ್ಯಕ್ರಮಗಳನ್ನೇ ಇಂದು ಎಲ್ಲ ಪಕ್ಷಗಳೂ ತಮ್ಮ ಪ್ರನಾಳಿಕೆಯಲ್ಲಿ ಘೋಷಿಸುತ್ತಿವೆ. ಅವರ ಪಡಿತರ ಚೀಟಿ, ವೃದ್ಧಾಪ್ಯವೇತನ, ಎಲ್ಲರಿಗೂ ಸೂರಿನ ವ್ಯವಸ್ಥೆ, ಹಸಿರು ಕ್ರಾಂತಿ, ಉಳುವವನೇ ಭೂಮಿಯ ಒಡೆಯ ಮುಂತಾದ ಯೋಜನೆಗಳು ಆದರ್ಶಪ್ರಾಯವಾಗಿವೆ. ಅವರು ಜನಮಾನಸದಲ್ಲಿ ಎಂದಿಗೂ ಪ್ರಿಯದರ್ಶಿನಿಯಾಗಿಯೇ ಉಳಿಯುತ್ತಾರೆ ಎಂದರು.


ಕಾಂಗ್ರೆಸ್ ಮುಖಂಡ ಎನ್. ರಮೇಶ್ ಮಾತನಾಡಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಹೆಸರು ಇಂದಿರಾ ಅವರದ್ದು. ಇಂಡಿಯಾ ಎಂದರೆ ಇಂದಿರಾ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾತಿ ಹೊಂದಿದ್ದರು. ಪಾಕಿಸ್ಥಾನಿ ದಂಗೆಕೋರರನ್ನು ಸಮರ್ಥವಾಗಿ ಎದುರಿಸಿದವರು. ತಾವು ಪ್ರಧಾನಿಯಾಗುವ ಅರ್ಹತೆ ಇದ್ದರೂ ಕೂಡ ಶಾಸ್ತ್ರಿಯವರಿಗೆ ಪ್ರಧಾನಿಯಾಗುವಂತೆ ನೋಡಿಕೊಂಡವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಖಲೀಂ ಉಲ್ಲಾ, ಶಿವಲಿಂಗಮೂರ್ತಿ, ನೇತಾಜಿ, ಸ್ಟೆಲ್ಲಾ ಮಾರ್ಟಿನ್, ಎನ್.ಡಿ. ಪ್ರವೀಣ್, ಅರ್ಚನ, ಚಂದ್ರಿಕಾ ಮುಂತಾದವರಿದ್ದರು.

Exit mobile version