Site icon TUNGATARANGA

ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್: ಅವಳಿ ಸಹೋದರರ ಉತ್ತಮ ಸಾಧನೆಗೆ ಆದಿಚುಂಚನಗಿರಿ ಶ್ರೀಗಳ ಹರುಷ


ಶಿವಮೊಗ್ಗ, ನ.೧೮:
ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಾಖೆಯ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭ನೇ ತರಗತಿ ಓದುತ್ತಿರುವ ಅವಳಿ ಸಹೋದರರಾದ ಪುನೀತ್.ಎಸ್. ಮತ್ತು ಪವನ್.ಎಸ್. ಷಟಲ್ ಬ್ಯಾಡ್ಮಿಂಟನ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರತಿಭೆಗಳು.
ಈ ಪ್ರತಿಭಾನ್ವಿತರು ೨೦೨೨ – ೨೩ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮತ್ತು ಬೆಂಗಳೂರು ದಕ್ಷಿಣದಲ್ಲಿ ನಡೆದ ವಿಭಾಗ ಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿ, ಚಾಕ ಚಕ್ಯತೆಯ ಆಟದ ಪ್ರದರ್ಶನ ನೀಡಿ, ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಉಡುಪಿ ಜಿಲ್ಲೆಯಲ್ಲಿ ನವೆಂಬರ್ ೧೫ ಮತ್ತು ೧೬ ರಂದು ಮರಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ೧೪ ವರ್ಷ ವಯೋಮಿತಿಯೊಳಗಿನ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಷಟಲ್ ಬ್ಯಾಡ್ಮಿಂಟನ್ ಲೀಗ್ ಮಾದರಿಯ ಪಂದ್ಯಾವಳಿಯಲ್ಲಿ ಗುರುಪುರದ ಬಿ ಜಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾನ್ವಿತ ಅವಳಿ ಸಹೋದರರಾದ ಪುನೀತ್ ಎಸ್ ಮತ್ತು ಪವನ್ ಎಸ್ ಲೀಗ್ ಮಾದರಿಯ ಎಲ್ಲಾ ಪಂದ್ಯಾವಳಿಗಳಲ್ಲಿ, ಕಲಬುರ್ಗಿ ವಿಭಾಗ, ಬೆಳಗಾವಿ ವಿಭಾಗ, ಮೈಸೂರು ವಿಭಾಗಗಳ ಮಧ್ಯೆ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ಹಾಗೂ ಬಿರುಸಿನ ಹೊಡೆತ ಮತ್ತು ಅಷ್ಟೇ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿ, ಪ್ರಥಮ ಸ್ಥಾನ ಹಾಗೂ ಅತ್ಯಾಕರ್ಷಕ ಪಾರಿತೋಷಕ ಮತ್ತು ಬಂಗಾರದ ಪದಕವನ್ನು ಸಂಸ್ಥೆಯ ಮಡಿಲಿಗೆ ತಂದು ಕೊಟ್ಟಿರುತ್ತಾರೆ.
ಈ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಬಂಗಾರದ ಪದಕ ಪಡೆದು, “ರಾಷ್ಟ್ರಮಟ್ಟದ “ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಈ ಕ್ರೀಡಾ ಪ್ರತಿಭೆಗಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

Exit mobile version