Site icon TUNGATARANGA

ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ನ.25 ರಿಂದ ಭದ್ರಾ ನಾಲೆಗಳಲ್ಲಿ ನೀರು ನಿಲುಗಡೆ


ಶಿವಮೊಗ್ಗ ನ.15:
ಮುಂಗಾರು ಹಂಗಾಮಿನ ಬೆಳೆಗಳಿಗೆ ಸಂಬಂಧಿಸಿದಂತೆ ಭದ್ರಾ ಜಲಾಶಯದಿಂದ ನಾಲೆಗಳಿಗೆ ಹರಿಸಲಾಗುತ್ತಿರುವ ನೀರನ್ನು ನ.25 ರ ರಾತ್ರಿಯಿಂದ ನಿಲುಗಡೆ ಮಾಡಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ತಿಳಿಸಿದರು.


2022-23 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ, ಬಲದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀರು ನಿಲ್ಲಿಸುವ ಸಂಬಂಧ ಚರ್ಚಿಸಲು ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ನಿರ್ಧರಿಸಿದಂತೆ ಭದ್ರಾ ಜಲಾಶಯದ ಎಲ್ಲ ನಾಲೆಗಳಲ್ಲಿ ಜ.25 ರ ರಾತ್ರಿಯಿಂದ ನೀರು ಹರಿಸುವುದನ್ನು ನಿಲ್ಲಿಸಲಾಗುವುದು. ಹಾಗು ಡಿಸೆಂಬರ್ 25 ರ ರಾತ್ರಿಯಿಂದ ನೀರನ್ನು ಹರಿಸಲಾಗುವುದು. ಈ ಮಧ್ಯೆ ನೀರಿನ ಲಭ್ಯತೆಗನುಸಾರ ಅವಶ್ಯಕತೆ ಬಿದ್ದಲ್ಲಿ ಅಥವಾ ಹೆಚ್ಚುವರಿ ನೀರು ಬಂದಲ್ಲಿ ಹಂತ ಹಂತವಾಗಿ ನೀರನ್ನು ಹರಿಸಲು ಕ್ರಮ ವಹಿಸಲಾಗುವುದು ಎಂದರು.


ದಿನಾಂಕ : 14-11-2022 ರಂದು ಜಲಾಶಯದಲ್ಲಿ 183 ಅಡಿ 8 1/4 ಇಂಚುಗಳಷ್ಟು ನೀರು ಸಂಗ್ರಹವಿದ್ದು, ಸದರಿ ಮಟ್ಟಕ್ಕೆ ನೀರಿನ ಸಂಗ್ರಹಣೆಯು 68.650 ಟಿ.ಎಂ.ಸಿ ಗಳಾಗಿದ್ದು ಇದರಲ್ಲಿ 8.50 ಟಿ.ಎಂ.ಸಿ ಬಳಕೆಗೆ ಬಾರದ(ಡೆಡ್ ಸ್ಟೋರೇಜ್) ನೀರಿನ ಪ್ರಮಾಣವಾಗಿದೆ. ಬಳಕೆಗೆ ಬರುವ ನೀರಿನ ಪ್ರಮಾಣ 54.818 ಟಿ.ಎಂ.ಸಿ ಗಳಾಗಿರುತ್ತದೆ ಮತ್ತು 13.832 ಟಿ.ಎಂ.ಸಿ ಎಂ.ಡಿ.ಡಿ.ಎಲ್ ಆಗಿರುತ್ತದೆ.
ಭದ್ರಾ ಜಲಾಶಯದ 2022-23 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡ ನಾಲೆಯಲ್ಲಿ ದಿನಾಂಕ: 15-07-2022 ರಿಂದ ಹಾಗೂ ಎಡದಂಡೆ ನಾಲೆಯಲ್ಲಿ ದಿನಾಂಕ: 23-07-2022 ರಿಂದ ಅಚ್ಚುಕಟ್ಟುದಾರರಿಗೆ ನೀರನ್ನು ಹರಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಒಂದು ತಿಂಗಳ ಅವಧಿಗಿಂತ ಹೆಚ್ಚು ಕಾಲ ನೀರನ್ನು ನಿಲ್ಲಿಸಿದರೆ ಬೆಳೆಗಳು, ತೋಟಗಳು ಒಣಗುತ್ತವೆ. ಆದ್ದರಿಂದ ಮಧ್ಯದಲ್ಲಿ 13 ರಿಂದ 15 ದಿನಗಳ ಕಾಲ ನೀರನ್ನು ಹರಿಸಿ ಮತ್ತೆ ನಿಲ್ಲಿಸಿದರೆ ಸೂಕ್ತವೆಂದು ಸಲಹೆ ನೀಡಿದರು.
ಕೃಷಿ ಇಲಾಖೆ ಅಧಿಕಾರಿಗಳು ಹಾಗು ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ನೀರಿನ ಅವಶ್ಯಕತೆ ಕುರಿತು ಮಾಹಿತಿ ನೀಡಿದರು.
ನೀರಾವರಿ ಸಲಹಾ ಸಮಿತಿ ಸದಸ್ಯರಾದ ಮಹೇಶ್, ಷಣ್ಮುಖಯ್ಯ, ನಾಗರತ್ನ ಸೇರಿದಂತೆ ಹಲವು ಸದಸ್ಯರು, ಕಾಲುವೆಗಳು ಮತ್ತು ಉಪಕಾಲುವೆಗಳಲ್ಲಿ ಹೂಳು ತುಂಬಿ ತೋಟಗಳು ಮತ್ತು ಜಮೀನುಗಳಿಗೆ ನೀರು ಹೋಗುತ್ತಿಲ್ಲ. ನೀರು ನಿಲುಗಡೆ ಮಾಡಿದ ವೇಳೆ ಹೂಳು ತೆಗೆಸುವ ಮತ್ತು ಜಂಗಲ್ ಕಟಿಂಗ್ ಕೆಲಸ ಆಗಬೇಕೆಂದು ಒತ್ತಾಯಿಸಿದರು.
ಸದಸ್ಯ ರಾಜಣ್ಣ, ನರೇಗಾ ಯೋಜನೆಯಡಿ ಚಾನಲ್‍ಗಳು, ಉಪ ಕಾಲುವೆಗಳ ಹೂಳು ಮತ್ತು ರಸ್ತೆ ರಿಪೇರಿಗೆ ಶೇ.30 ಅನುದಾನ ನೀಡುವಂತೆ ದಾವಣಗೆರೆ ಜಿ.ಪಂ ಸಿಇಓ ರವರಿಗೆ ಅಧ್ಯಕ್ಷರು ಪತ್ರ ಬರೆಯುವಂತೆ ಮನವಿ ಮಾಡಿದರು.
ಸದಸ್ಯರಾದ ಹನುಮಂತಪ್ಪ ಮತ್ತು ಇತರೆ ಸದಸ್ಯರು, ಚಾನಲ್‍ಗಳು ಮತ್ತು ಉಪ ಕಾಲುವೆಗಳು ಹಾಳಾಗಿದ್ದು ರಿಪೇರಿ ಆಗಬೇಕು, ಜೊತೆಗೆ ತುಂಬಿರುವ ಹೂಳನ್ನು ತೆಗೆಸಬೇಕು. ನೀರಾವರಿ ಇಲಾಖೆ ಅಥವಾ ನರೇಗಾದಡಿ ಈ ಕೆಲಸಗಳನ್ನು ಮಾಡಿಸಬೇಕೆಂದು ಮನವಿ ಮಾಡಿದರು.
ಸದಸ್ಯರಾದ ಷಡಾಕ್ಷರಪ್ಪ ಮತ್ತು ಇತರರು ನೀರಾವರಿ ಇಲಾಖೆಯಲ್ಲಿ ನಾಲಾ ರಿಪೇರಿ, ನಿರ್ವಹಣೆಗೆ ಅನುದಾನವೇ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸಬೇಕು. ಹಾಗೂ ಇಲಾಖೆಯ ಇಂಜಿನಿಯರುಗಳು ಚಾನಲ್‍ಗಳಲ್ಲಿ ನೀರು ಸಮರ್ಪಕವಾಗಿ ಹರಿಯುವಂತೆ ನಿರ್ವಹಣೆ ಮಾಡಬೇಕೆಂದು ಮನವಿ ಮಾಡಿದರು.
ನೀರಾವರಿ ಇಲಾಖೆ ಇಂಜಿನಿಯರ್‍ಗಳು ಪ್ರತಿಕ್ರಿಯಿಸಿ, ತಮ್ಮ ಇಲಾಖೆಯಲ್ಲಿ ನಿರ್ವಹಣೆ ಮತ್ತು ರಿಪೇರಿಗೆ ಅನುದಾನ ಇಲ್ಲವೆಂದು ತಿಳಿಸಿದರು.
ಅಧ್ಯಕ್ಷರು ಪ್ರತಿಕ್ರಿಯಿಸಿ, ಕಾಡಾದ ವತಿಯಿಂದ ಚಾನಲ್ ರಿಪೇರಿ, ರಸ್ತೆ ಮತ್ತು ನಿರ್ವಹಣೆ ಮಾಡಲು ಅನುದಾನವಿಲ್ಲ. ನರೇಗಾ ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಕೇಳಿಕೊಳ್ಳಲಾಗಿದೆ. ಜೊತೆಗೆ ಶಾಸಕರು ಮತ್ತು ಸಂಸದರು ಈ ಕಡೆ ಗಮನ ಹರಿಸಿ, ನೀರಾವರಿ ಇಲಾಖೆ ಅಥವಾ ನೀರಾವರಿ ನಿಗಮಕ್ಕೆ ಅನುದಾನ ನೀಡಿದಲ್ಲಿ ಈ ಕೆಲಸಗಳು ಸಾಧ್ಯವಾಗಲಿದೆ ಎಂದರು.
ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯರು, ಕಾಡಾ ಸದಸ್ಯರು, ರೈತ ಮುಖಂಡರು, ರೈತರು, ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾದ ಸುಜಾತ, ಕಾಡಾ ಆಡಳಿತಾಧಿಕಾರಿ ಪ್ರವೀಣ್, ಇತರೆ ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೃಷಿ ಇಲಾಖೆ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.
(

Exit mobile version