ಕಳೆದ ಒಂಬತ್ತು ವರುಷಗಳ ಹಿಂದೆ ದಿನಾಂಕಃ-06-06-2013 ರಂದು ತೀರ್ಥಹಳ್ಳಿಯ ವಾಟಗಾರು ಗ್ರಾಮದ ವಾಸಿ ಪರವಾನಿಗೆ ಇಲ್ಲದ ಬಂದೂಕಿನಿಂದ ಓರ್ವನನ್ನು ಕೊಲೆ ಮಾಡಿ ಆತನ ಬಳಿಯ ಆಬರಣ ಬೈಕ್ ಅಪಹರಿಸಿದ್ದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಮಗ್ರಮಾಹಿತಿ: ಭುಜಂಗ @ ಪಾನ್ ಈತನು ಮಳಲಿಮಕ್ಕಿ ಗ್ರಾಮದ ವಾಸಿ ನಾಗರಾಜ್ 35ವರ್ಷ ರವರನ್ನು ಕೆಸಿನಮನೆ ಅಭಯಾರಣ್ಯದ ಗುಡ್ಡಕ್ಕೆ ಕರೆಸಿಕೊಂಡು ತನ್ನ ಬಳಿ ಇದ್ದ ಪರವಾನಿಗೆ ಇಲ್ಲದ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ, ಆತನ ಬಳಿ ಇದ್ದ ಬೈಕ್, ನಗದು ಹಣ, ಬಂಗಾರದ ಚೈನ್ ಮತ್ತು ಉಂಗುರವನ್ನು ತೆಗೆದುಕೊಂಡು ಹೋದ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿಗಳಾದ ಶ್ರೀ ಓಂಕಾರ್ ನಾಯ್ಕ್, ಡಿವೈಎಸ್.ಪಿ ತೀರ್ಥಹಳ್ಳಿ ಉಪ ವಿಭಾಗರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀಮತಿ ಪುಷ್ಪ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ- 14-11-2022 ರಂದು ಆರೋಪಿ ಭುಜಂಗ @ ಪಾನ್ @ ಭುಜಂಗಪೂಜಾರಿ, 43 ವರ್ಷ, ಹುಲಿಮನೆ ವಾಟಗಾರು ಗ್ರಾಮ ತೀರ್ಥಹಳ್ಳಿಯ ಈತನ ವಿರುದ್ಧ ಕಲಂ 302 ಮತ್ತು ಕಲಂ 7, 25 Arms act ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 2,00,000 /- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 01 ವರ್ಷ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.