Site icon TUNGATARANGA

ಶಿವಮೊಗ್ಗ ಖಾಸಗಿ ಬಸ್ ಗಳಿಗೆ ಹತ್ತು ದಿನದೊಳಗೆ ಕಡ್ಡಾಯ ಸಿಸಿ ಕ್ಯಾಮರಾ ಅಳವಡಿಕೆ/ ಖಡಕ್ ಸೂಚನೆಗಳೇನೇನು ಗೊತ್ತಾ?

ಶಿವಮೊಗ್ಗ, ನ.11:

ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್, ಶಿವಮೊಗ್ಗ ಡಿವೈಎಸ್ಪಿ ಬಾಲರಾಜ್ ಮತ್ತು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್.ಟಿ.ಓ) ಯವರ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಬಸ್ ಮಾಲಿಕರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗದ ಖಾಸಗಿ ಬಸ್ ಗಳ ಮಾಲೀಕರ ಸಭೆ ನಡೆಸಿ ಈ ಕೆಳಕಂಡ ಸೂಚನೆಗಳನ್ನು ನೀಡಿದರು.


1) ಖಾಸಗಿ ಬಸ್ ಗಳ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವುದು. ತಪಾಸಣೆಯ ವೇಳೆ ಸಮವಸ್ತ್ರ ಧರಿಸದೆ ಇರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
2) ಚಾಲಕರು ಹಾಗೂ ನಿರ್ವಾಹಕರುಗಳು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸುವುದು ಮತ್ತು ತೊಂದರೆಯಾಗದಂತೆ ನಡೆದುಕೊಳ್ಳುವುದು.


3) ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವೇಗ ಮಿತಿ ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು.
4) ಬಸ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ, ನಿಗಧಿ ಪಡಿಸಿದ ಬಸ್ ನಿಲ್ದಾಣ ಗಳಲ್ಲಿ ಮಾತ್ರ ನಿಲುಗಡೆ ಮಾಡುವುದು.


5) ಬಸ್ ಗಳಲ್ಲಿ ಸರಕು ಸಾಗಾಣಿಕೆಯ (Parcel Service) ಸಮಯದಲ್ಲಿ ಗಮನ ಹರಿಸುವುದು. ಒಂದು ವೇಳೆ ಯಾವುದೇ ಅನುಮಾನಾಸ್ಪದ ಸರಕುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡುವುದು.
6) Public Safety Act ಪ್ರಕಾರ ಶಿವಮೊಗ್ಗ ನಗರ ಖಾಸಗಿ ಬಸ್ ನಿಲ್ದಾಣ ಮತ್ತು ತಾಲ್ಲೂಕು ಬಸ್ ನಿಲ್ದಾಣಗಳಲ್ಲಿ 10 ದಿನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು.
7) ಬಸ್ ಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಂಬಂಧ ಪಟ್ಟ ಖಾಸಗಿ ಬಸ್ ಗಳ ಮಾಲೀಕರೆ ಹೊಣೆಗಾರರಾಗಿರುತ್ತಾರೆ.
8) ಚಾಲಕರು ಬಸ್ ಗಳನ್ನು ಚಾಲನೆ ಮಾಡುವ ಸಮಯದಲ್ಲಿ, ಮೊಬೈಲ್ ಬಳಸುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಉಪವಿಭಾಗ, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ಮತ್ತು ಪಿಎಸ್ಐ (ಸಂಚಾರ) ರವರುಗಳು ಉಪಸ್ಥಿತರಿದ್ದರು.

Exit mobile version