Site icon TUNGATARANGA

ಹಿಂದೂ ಧರ್ಮ ವಿರೋಧಿ ನೀತಿಗೆ ಖಂಡನೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ | ಮುಸ್ಲಿಂ ಮತಗಳಿಗಾಗಿ ಅವಹೇಳನಕಾರಿ ಹೇಳಿಕೆ | ಹಿಂದೂ ಸಮಾಜ ಚಪ್ಪಲಿಯಲ್ಲಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಶಿವಮೊಗ್ಗ, ರಾಜ್ಯ ಕಾಂಗ್ರೆಸ್ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹಿಂದು ವಿರೋಧಿ ನೀತಿಯನ್ನು ಬಿಡಬೇಕು ಮುಸ್ಲಿಂ ಒಟಿಗಾಗಿ ಹಿಂದು ಸಮಾಜವನ್ನು ಅವಹೇಳನ ಮಾಡುವ ಕಾಂಗ್ರೆಸ್ ಪಕ್ಷದ ಧೋರಣೆಯ ಬಗ್ಗೆ ಅಸಹ್ಯವಾಗುತ್ತಿದ್ದು, ನಗರ ಬಿಜೆಪಿ ತೀವ್ರವಾಗಿ ಖಂಡಿಸುವುದಾಗಿ ಬಿಜೆಪಿ ನಗರ ಕಾರ್ಯದರ್ಶಿ ದೀನದಯಾಳ್ ಹೇಳಿದ್ದಾರೆ. 

ಅವರು ಇಂದು ನಗರದ ಗೋಪಿವೃತ್ತದಲ್ಲಿ ನಗರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್‍ನ ಹಿಂದು ಧರ್ಮ ವಿರೋಧಿ ನೀತಿಯನ್ನು ಪ್ರತಿಭಟಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. 

ಹಿಂದಿನಿಂದಲು ಕಾಂಗ್ರೆಸ್ ಮುಸ್ಲಿಂ ಮತಗಳಿಗಾಗಿ ಹಿಂದು ಧರ್ಮ, ಹಿಂದು ಸಮಾಜ ಹಾಗೂ ಹಿಂದು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿಕೊಂಡು ಬರುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೇ ಗಾಂಧಿಜಿಯವರು ಕಾಂಗ್ರೆಸ್‍ನ್ನು ವಿಸರ್ಜಿಸುವಂತೆ ಸಲಹೆ ನೀಡಿದ್ದರು. ಆಗಿನ ಕಾಂಗ್ರೆಸ್ ನಾಯಕರಿಗೆ ಅಂದಿನ ದಿನಗಳಲ್ಲೇ ಕಾಂಗ್ರೆಸ್‍ನ ಮುಸ್ಲಿಂ ತುಷ್ಟಿಕರಣದ ಬಗ್ಗೆ ಅನುಭವಕ್ಕೆ ಬಂದಿತ್ತು ಎಂದರು. 

ಹಿಂದು ಪದವೇ ಅಶ್ಲೀಲ ಎನ್ನುವ ಸತೀಶ್ ಜಾರಕಿಹೊಳಿ ಹುಟ್ಟಿದ್ದೆಲ್ಲಿ, ಅವರು ಯಾವ ದೇಶದಲ್ಲಿದ್ದಾರೆ.  ಅವರ ಕುಟುಂಬದವರನ್ನು ಕೇಳಲಿ ಇಡೀ ಹಿಂದು ಸಮಾಜ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ನಿರಂತರವಾಗಿ ಹಿಂದು ಧ್ವಜ, ಹಿಂದು ಧರ್ಮ ಮತ್ತು ಈ ಸನಾತನ ಹಿಂದು ಭೂಮಿಯನ್ನು ಅವಮಾನಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್ ನಡೆಸುತ್ತಾ ಬಂದಿದೆ. ಆದರೆ ಹಿಂದು ಸಮಾಜ ಮತ್ತು ಬಿಜೆಪಿ ಹಿಂದು ಧರ್ಮ ಮತ್ತು ಸಮಾಜವನ್ನು ಉಳಿಸಲು ಕಂಕಣಬದ್ಧವಾಗಿದೆ ಎಂದರು.

ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ರಾಜ್ಯದ ಪ್ರತಿ ನಗರದಲ್ಲು ಧರ್ಮನಿಂದನೆಯ ಕೇಸ್ ದಾಖಲಿಸಲಾಗುವುದು. ಅವರಿಗೆ ಸಮರ್ಥನೆ ಮಾಡಿದ ದಿನೇಶ್ ಗುಂಡುರಾವ್ ಕೂಡ ಮುಸ್ಲಿಂ ಓಲೈಕೆಗಾಗಿ ಹೇಳಿಕೆ ನೀಡುತ್ತಿರುವುದು ಮತ್ತು ಕೆಲ ಕಾಂಗ್ರೆಸ್ ಮುಖಂಡರು ಅವರ ಹೇಳಿಕೆ ತಪ್ಪು ಎಂದು ನಾಟಕವಾಡುತ್ತಿರುವುದು ಯಾವುದೆ ಕ್ರಮಕೈಗೊಳ್ಳದೆ ಸಮರ್ಥಿಸುತ್ತಿರುವುದು ಎಲ್ಲವನ್ನು ಜನ ಗಮನಿಸುತ್ತಿದ್ದು ಹಿಂದು ಸಮಾಜ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದರು. 

ಬಿಜೆಪಿ ನಗರಾಧ್ಯಕ್ಷ ಜಗದೀಶ್ ಮಾತನಾಡಿ, ಹಿಂದು ಧರ್ಮದ ಪರ ಹೋರಾಟ ಮಾಡುತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ, ಯಾವುದೋ ಪರ್ಷಿಯನ್ ನಿಘಂಟು ನೋಡಿ ಅದರಲ್ಲಿ ಹಿಂದು ಎಂಬ ಪದ ಅಶ್ಲೀಲ ಅರ್ಥ ನೀಡುತ್ತದೆ ಎಂದು ಹೇಳುವ ಸತೀಶ್ ಜಾರಕಿಹೊಳಿ ಮೊದಲು ಕನ್ನಡದ ನಿಘಂಟು ಓದಲಿ. ಹಿಂದು ಪದದ ಅರ್ಥಗೊತ್ತಾಗಲು ಅವರ ಅಕ್ಕ, ಅಮ್ಮ ಮತ್ತು ಮಕ್ಕಳನ್ನು ಮತ್ತು ಕುಟುಂಬವನ್ನು ಕೇಳಿ ತಿಳಿದುಕೊಳ್ಳಲಿ ಎಂದರು. 

ಹಿಂದು ಸಮಾಜವನ್ನು ಹೀಯಾಳಿಸುವುದೇ ನಿಮ್ಮ ರಾಜಕೀಯದ ಭಾಗವಾಗಿದ್ದರೆ ನಿಮ್ಮ ನಾಲಿಗೆಯನ್ನು ಮೊದಲು ಹದ್ದುಬಸ್ತಿನಲ್ಲಿಡಿ ಕಾಶ್ಮೀರವನ್ನು ಬಿಟ್ಟುಕೊಟ್ಟು ಮುಸ್ಲಿಂ ತುಷ್ಟೀಕರಣ ಮಾಡಿಕೊಂಡು ಬಂದ ಪಕ್ಷ ಕಾಂಗ್ರೆಸ್ ಎಂದರು. 

ಈ ಸಂದರ್ಭದಲ್ಲಿ ಸ್ಭೂಡಾ ಅಧ್ಯಕ್ಷ ನಾಗರಾಜ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ್, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಸುನಿತಾ ಅಣ್ಣಪ್ಪ, ಸುವರ್ಣ ಶಂಕರ್, ಸುರೇಖಾ ಮುರುಳೀಧರ್, ಕಲ್ಪನಾರಾಮ್, ಸಂತೋಷ್ ಬಳ್ಳಕೆರೆ, ಮೋಹನ್‍ರೆಡ್ಡಿ ಮೊದಲಾದವರಿದ್ದರು. 

Exit mobile version