Site icon TUNGATARANGA

ಮಗನಿಗೆ ಮೀಸೆ ಮೂಡುವ ಮುನ್ನ, ಪರವಾನಿಗೆ ಇಲ್ದೇ ಬೈಕ್ ಕೊಟ್ರೆ ಅಪ್ಪನಿಗೆ ‘ದಂಡ’: ಎಚ್ಚರದ ಗಂಟೆ ಬಾರಿಸಿದ ನ್ಯಾಯಾಲಯ

ಕಾಲ್ಪನಿಕ ಚಿತ್ರ

ಶಿವಮೊಗ್ಗ, ನ.9:

ನನ್ ಮಗ ಹೀರೋ ಎಂದು ಪೋಜ್ ಕೊಡುವ “ಅಪ್ಪನಿಗೆ” ನಿನಗಿದೋ ಎಚ್ಚರದ ಗಂಟೆ ಬಾರಿಸುವಂತಿರುವ ಸುದ್ದಿ ಇಲ್ಲಿದೆ ನೋಡಿ. ನಿಮ್ಮ ಮಗ 18 ವರ್ಷ ವಯಸ್ಸಿಗೆ ಬರುವ ಮುನ್ನ ಆತನ ಇಡೀ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.

ನೀವು ಮಗ ಗಾಡಿ ಹೊಡೆಯುತ್ತಾನೆ ಎಂದು ನಿಮ್ಮ ಬೈಕ್ ಕೊಟ್ಟು ಕಳಿಸಿದರೆ ನಿಮಗೆ ನ್ಯಾಯಾಲಯ ಸರಿಯಾಗಿ ಏಟು ನೀಡುತ್ತದೆ ಎಚ್ಚರವಾಗಿರಿ.

ಅಂದ ಹಾಗೆ ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದ್ದು ಅಪ್ರಾಪ್ತ ಬಾಲಕ ಹೆಲ್ಮೆಟ್ ರಹಿತವಾಗಿ ಬೈಕ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಅವರ ಅಪ್ಪನಿಗೆ ನ್ಯಾಯಾಲಯವು ಬರೋಬ್ಬರಿ 25 ಸಾವಿರ ದಂಡ ವಿಧಿಸಿದೆ.

ಘಟನೆಯ ವಿವರದಲ್ಲಿ ಕೇವಲ ವಾಹನ ಚಲಾಯಿಸಿದ್ದು ಹಾಗೂ ಹೆಲ್ಮೆಟ್ ಧರಿಸಿರುವುದು ಕಾರಣವಾಗಿದ್ದರೂ ಸಹ ಆತ ಚಾಲನಾ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಆತನಿಗೆ ಯಾವುದೇ ಕಾರಣಕ್ಕೂ ವಾಹನ ಚಲಾವಣೆಗೆ ಅವಕಾಶ ನೀಡದಿರುವುದು ಆದ್ಯ ಕರ್ತವ್ಯ ಎಂಬುದನ್ನು ತಿಳಿ ಹೇಳಲು ಈ ನ್ಯಾಯಾಲಯದ ಆದೇಶ ಎಚ್ಚರಿಕೆಯ ಗಂಟೆ ಎಂದೇ ಹೇಳಬಹುದು. ಮಗನನ್ನು ಹೀರೋ ಎಂದು ಪುಕ್ಕಟ್ಟೆಯಾಗಿ ಬಿಂಬಿಸಲು ಹೋದ ಬಹುತೇಕ “ಅಪ್ಪ”ಗಳಿಗೆ ಕಿವಿ ಹಿಂಡುವ ಕೆಲಸ ಮಾಡಿದೆ.

‌‌‌‌‌‌‌ ಘಟನೆ ವಿವರ ಇಂತಿದೆ

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ಟಾಕೀಸ್ ನ ರಸ್ತೆಯಲ್ಲಿ, 16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬನು ಕೆಎ-14 ಇಆರ್-1884 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಹೆಲ್ಮೆಟ್ ಧರಿಸದೇ ಮತ್ತು ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರದೇ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಆತನ ತಂದೆ ಆಸಿಫ್ ಬಾಷಾ, 46 ವರ್ಷ, ತೀರ್ಥಹಳ್ಳಿ ಟೌನ್ ರವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ನೀಡಿದ್ದು, ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ತೀರ್ಥಹಳ್ಳಿಯ ನ್ಯಾಯಾಧೀಶರು ದ್ವಿ ಚಕ್ರ ವಾಹನದ ಮಾಲೀಕರಾದ ಬಾಲಕನ ತಂದೆ ಆಸಿಫ್ ಬಾಷಾ ರವರಿಗೆ ರೂ 25,000/- ದಂಡ ವಿಧಿಸಿರುತ್ತಾರೆ.

Exit mobile version