Site icon TUNGATARANGA

ನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಶಬ್ದ / ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದವನ ಕಾಲಿಗೆ ಗುಂಡೇಟು ನೀಡಿದ ಖಾಕಿ ಪಡೆ

ಶಿವಮೊಗ್ಗ: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಮತ್ತೆ ಗುಂಡಿನ ಶಬ್ದ ಮೊಳಗಿದ್ದು, ಇತ್ತೀಚೆಗೆ ರಾಯಲ್ ಆರ್ಕಿಡ್ ಹೋಟೆಲ್ ಬಳಿ ಅಶೋಕ್ ಪ್ರಭು ಎಂಬ ಪಾದಚಾರಿಯ ಮೇಲೆ ಹಲ್ಲೆ ಮಾಡಿದ ಅಸ್ಲಾಂ ಅಲಿಯಾಸ್ ಚೋರ್ ಅಸ್ಲಾಂ ಕಾಲಿಗೆ ದೊಡ್ಡ ಪೇಟೆ ಠಾಣೆ ಪಿಎಸ್‌ಐ ವಸಂತ್ ಅವರು ಗುಂಡೇಟು ನೀಡಿ ಆರೋಪಿಯನ್ನು ಬಂಧಿಸಿದ್ದಾರೆ.


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಆರೋಪಿ ಅಸ್ಲಾಂ ಪುರ್ಲೆಯ ರಾಶಿ ಡೆವಲಪರ್ಸ್ ಲೇಔಟ್ನಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಸ್ಲಾಂ ತನ್ನ ಬಳಿ ಇರುವ ಚಾಕುವಿನಿಂದ ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ರಮೇಶ್ ಜೀವರಕ್ಷಣೆಗೆ ಪಿಎಸ್‌ಐ ವಸಂತ್ ಅವರು ಅಸ್ಲಾಂ ಕಾಲಿಗೆ ಒಂದುಸುತ್ತು ಗುಂಡು ಹಾರಿಸಿದ್ದು, ಸ್ಥಳದಲ್ಲೇ ಆತನನ್ನು ಬಂಧಿಸಿ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ರಮೇಶ್ರವರಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.


ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳನ್ನು ಗುರುತಿಸಲಾಗಿದ್ದು, ನಿನ್ನೆ ರಾತ್ರಿ ಎ-೨ ಆಸೀಫ್ ಬಿನ್ ಅನ್ವರ್, ಹೊಸನಗರ ರಸ್ತೆ, ಸಾಗರ ಟೌನ್ ನಿವಾಸಿ ಈತನನ್ನು ದಸ್ತಗಿರಿ ಮಾಡಲಾಗಿತ್ತು. ಇಂದು ಬೆಳಿಗ್ಗೆ ಅಸ್ಲಾಂನನ್ನು ಬಂಧಿಸಿದ್ದು, ಒಟ್ಟು ಮೂವರು ಆರೋಪಿಗಳು ಸಿಕ್ಕಿದ್ದಾರೆ. ಇನ್ನೋರ್ವ ಆರೋಪಿ ಸಿಗಬೇಕಾಗಿದೆ ಎಂದರು.


ಅಸ್ಲಾಂ ಈ ಪ್ರಕರಣಖ್ಕೆ ಸಂಬಧಿಸಿದಂತೆ ಪ್ರಮುಖ ಆರೋಪಿಯಾಗಿದ್ದು, ಈತನ ಮೇಲೆ ೯ ಕೇಸುಗಳಿದ್ದು, ಪ್ರಾಪರ್ಟಿ ರಿಲೇಟೆಡ್ ಅಪರಾಧ ದಾಖಲಾಗಿದೆ. ಈ ನಾಲ್ವರು ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗವಹಿಸಿದ್ದು ಕಂಡುಬಂದಿದೆ. ಇವರ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದ್ದು, ಬೇಲ್ ಮೇಲೆ ಹೊರಗೆ ಬಂದು ಮತ್ತೆ ಇಂತಹ ದುಷ್ಕೃತ್ಯಗಳಿಗೆ ಕೈಹಾಕಿದ್ದರಿಂದ ಅವರ ಬೇಲನ್ನು ಕ್ಯಾನ್ಸಲ್ ಮಾಡಲು ಶಿಫಾರಸು ಮಾಡಲಾಗುವುದು ಎಂದರು.


ಅಮಾಯಕರ ಮೇಲೆ ಹಲ್ಲೆ ನಡೆಸಿ ರಾಬರಿ ಮಾಡುವಂತಹ ಹಲವು ಕ್ರಿಮಿನಲ್ಗಳನ್ನು ಇಲಾಖೆ ಗಮನಿಸುತ್ತಿದೆ. ೨೩ ಜನರ ಗಡಿಪಾರು ಲಿಸ್ಟ್ನ್ನು ತಯಾರಿಸಲಾಗಿದ್ದು, ಅದರಲ್ಲಿ ಮೂವರಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಗಡಿಪಾರಿಗೆ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕ್ರಿಮಿನಲ್ಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಠಿನ ಕ್ರಮ ಕೈಗೊಳ್ಳಲಾಗುವುದು. ಗೂಂಡಾ ಕಾಯ್ದೆ ಕೂಡ ಸದ್ಯದಲ್ಲೇ ಜಾರಿ ಮಾಡಲಿದ್ದೇವೆ ಎಂದರು.


ದುಡಿದು ಜೀವನ ಮಾಡಲು ಬೇಕಾದಷ್ಟು ದಾರಿಗಳಿವೆ. ತಮಗೆ ಉದ್ಯೋಗ ಇಲ್ಲ, ಪೋಷಕರಿಲ್ಲ, ಕುಟುಂಬದಿಂದ ಹೊರಗಿದ್ದೇನೆ ಎಂಬ ನೆಪವೊಡ್ಡಿ ಅಪರಾಧ ಕೃತ್ಯಗಳಿಗೆ ಕೈಹಾಕಿದರೆ ಅವರಿಗೆ ಜೈಲು ಗ್ಯಾರಂಟಿ. ಕಾನೂನಿನಲ್ಲಿ ಯಾವುದೇ ರಿಯಾಯಿತಿ ಇಲ್ಲ ಎಂದರು.
ಪೊಲೀಸರು ತಮ್ಮ ಪ್ರಾಣದ ಹಂಗುತೊರೆದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಮೇಲೆ ದಾಳಿ ಮಾಡಿದಾಗ ಆತ್ಮರಕ್ಷಣೆಗೆ ಇಂತಹ ಕ್ರಮ ಅನಿವಾರ್ಯ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ವಿಕ್ರಂ ಅಮ್ಟೆ, ಡಿವೈಎಸ್ಪಿ ಬಾಲರಾಜ್ ಉಪಸ್ಥಿತರಿದ್ದರು.

Exit mobile version