ಶಿವಮೊಗ್ಗ,ಅ.23: ರಾಜ್ಯದಲ್ಲಿ ಈವರೆಗೂ ನೇಮಕಗೊಂಡಿರುವ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಕುರಿತು ಸಮಗ್ರವಾಗಿ ಪುನರ್ ಪರಿಶೀಲನೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಕಳೆದ 20 ವರ್ಷಗಳಿಂದ ಅಂದರೆ 2001-02 ರಿಂದ ರವರೆಗೆ 2020-21ರ ಇಂದಿನವರೆಗೆ ನಡೆದಿರುವ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಸಮಗ್ರ ಮಾಹಿತಿಯನ್ನು ಮತ್ತೊಮ್ಮೆ ಪುನರ್ ಪರಿಶೀಲಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷರು ಶಿಕ್ಷಣ ಇಲಾಖೆಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಪುನರ್ ಪರಿಶೀಲನೆಯ ವಿಷಯದ ಕುರಿತು ಶಿಕ್ಷಣ ಇಲಾಖೆ ಆಯುಕ್ತರ ಅನುಮೋದನೆ ಮೇರೆಗೆ ಜಂಟಿ ನಿರ್ದೇಶಕರು ಸಹ ನಿರ್ದೇಶಕರಿಗೆ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದಾರೆ. ಈ ಕ್ರಮದ ಕುರಿತು ಸರ್ಕಾರ ಕೈಗೊಳ್ಳುವ ತೀರ್ಮಾನದಂತೆ ಪರಿಶೀಲನೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಹಿಂದೆ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮವಾಗಿ ನಡೆದಿರುವ ಹಾಗೂ ನಕಲಿ ಶಿಕ್ಷಕರು ಸೇರ್ಪಡೆಗೊಂಡಿರುವ ಬಗ್ಗೆ ನಡೆದ ತನಿಖೆಯಲ್ಲಿ ಸುಮಾರು ಜನ ತಪ್ಪಿತಸ್ಥರು ಪತ್ತೆಯಾಗಿದ್ದು, ಇದರಲ್ಲಿ ಇಲಾಖೆಯ ಅಧಿಕಾರಿಗಳು, ಅದರಲ್ಲೂ ನಿವೃತ್ತ ಅಧಿಕಾರಿಗಳನ್ನು ಬಂಧಿಸಿ ಈಗಾಗಲೇ ವಿಚಾರಣೆಗೊಳಪಡಿಸಿದೆ.
ಈ ನಡುವೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪತ್ರದ ಅನುಸಾರ ಮತ್ತೊಮ್ಮೆ ಎಲ್ಲಾ ಶಿಕ್ಷಕರ ನೇಮಕಾತಿಯ ಪುನರ್ ಪರಿಶೀಲನೆ ಆದರೆ ಇನ್ನೂ ಸಹ ನಕಲಿ ಶಿಕ್ಷಕರು ಸಿಕ್ಕಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳಿಯುವಂತಿಲ್ಲ. ಏಕೆಂದರೆ ಅಂದಿನಿಂದ ಇಂದಿನವರೆಗೆ ನಡೆದ ಸಣ್ಣಪುಟ್ಟ ಪರಿಶೀಲನೆಗಳಲ್ಲಿ ಅಕ್ರಮಗಳು ಹಾಗೂ ನಕಲಿ ನೇಮಕಾತಿಗಳು ನಡೆದಿರುವ ಕುರುಹುಗಳು ಹಾಗೂ ಆರೋಪಗಳು ಕೇಳಿಬಂದಿವೆ ಹಾಗೂ ತಿಳಿದುಬಂದಿದೆ. ಸರ್ವ ಶಿಕ್ಷಣ ಅಭಿಯಾನ ಆರಂಭಗೊಂಡ ನಂತರ ಇಲಾಖೆಯು ಶಾಲೆಗಳ ಉದ್ದೇಶಗಳ ಯೋಜನೆ ಹಾಗೂ ಅನುಷ್ಠಾನಕ್ಕೆ ಬಂದ ಮೇಲೆ ಸಾಕಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಯಿತು.
2001 ರಿಂದ ಇಲ್ಲಿಯವರೆಗೆ ಪರಿಶೀಲನೆ ನಡೆಯುವ ಹಂತವನ್ನು ಅವಲೋಕಿಸಿದಾಗ ಅಂದಿನ ಅವಧಿಯಲ್ಲಿ ಹಾಲಿ ಆಡಳಿತ ಪಕ್ಷ ವಿರೋಧ ಪಕ್ಷವಾಗಿದ್ದೆ ಹೆಚ್ಚು ಕಾಲ. ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರನ್ನು ಈ ಚಾಟಿಯ ನೆಪದಲ್ಲಿ ಒಂದಿಷ್ಟು ಕೆದಕಬಹುದೆಂದು ಅಂದಾಜಿಸಲಾಗಿದೆ.
ಶಿಕ್ಷಕರೇ ನಿಮ್ಮ ನೇಮಕಾತಿಯ ವಿಚಾರ ಮತ್ತೊಮ್ಮೆ ಪುನರ್ ಪರಿಶೀಲನೆ ನಡೆಯುವುದು ಖಚಿತವೆನ್ನಲಾಗುತ್ತಿದೆ.