Site icon TUNGATARANGA

ಕಲಾವಿದರಿಗೆ ಮಾಶಾಸನ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ: ಗಣೇಶ್ ಬಿಳಿಗಿ ಆರೋಪ

ಶಿವಮೊಗ್ಗ: ಕಲಾವಿದರಿಗೆ ಮಾಶಾಸನ ನೀಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ಎಸಗುತ್ತಿರುವುದು ಖಂಡನೀಯ ಎಂದು ಕನ್ನಡ ಜಾನಪದ ಪರಿಷತ್ ನ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕ ಗಣೇಶ್ ಬಿಳಿಗಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಕರಾವಳಿ ಭಾಗದ ದೈವ ನರ್ತನ ಕಲಾವಿದರಿಗೆ 2000 ರೂ. ಮಾಶಾಸನ ಘೋಷಣೆ ಮಾಡಿರುವುದು  ಸಂತಸದ ವಿಷಯವೇ. ಹಾಗೆ ಎಲ್ಲಾ ಪ್ರಕಾರದ ಕಲಾವಿದರಿಗೆ ಮಾಶಾಸನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಬುಡಕಟ್ಟು ಸಮಾಜ ಸಾಂಸ್ಕೃತಿಕ ಹಲವಾರು ಕಲಾ ಪ್ರಕಾರಗಳಿಗೆ  ತಾಯಿ ಇದ್ದಂತೆ, ಗೊರವರು, ಈರಗಾರರು ನೀಲಗಾರರು, ಪೂಜಾ ಕುಣಿತ ಕಲಾವಿದರು, ಡೊಳ್ಳು ಕುಣಿತ ಕಲಾವಿದರು, ವೀರಗಾಸೆ ಕಲಾವಿದರು, ಜೋಗಯ್ಯ ಇನ್ನೂ ಹಲವಾರು ಜಾನಪದ ಶೈಲಿಯ ಕಲಾವಿದರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೂ ಸಹ ಮಾಶಾಸನ ಸಿಗಲೇಬೇಕು. ಈ ಸರ್ಕಾರವು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚಿ ಕಲಾವಿದರಲ್ಲೇ ಭಿನ್ನಾಭಿಪ್ರಾಯ ಮೂಡಿಸಿ ಅನ್ಯಾಯವೆಸಗುತ್ತಿದೆ. ವೋಟ್ ಬ್ಯಾಂಕಿಗಾಗಿ ಕಲೆಯನ್ನು ಮತ್ತು ಕಲಾವಿದರನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ.

 ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಎಲ್ಲಾ ಕಲಾ ಪ್ರಕಾರಗಳ ಕಲಾವಿದರಿಗೂ ಮಾಶಾಸನ ಘೋಷಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಕಲಾವಿದರು ತಿರುಗಿ ಬೀಳುವುದು ಸಾಕಷ್ಟು ದೂರವಿಲ್ಲ. ಕಲಾವಿದರಿಗೆ ತಾರತಮ್ಯ ಎಸಗುತ್ತಿರುವ ಸರ್ಕಾರಕ್ಕೆ ನಮ್ಮದೊಂದು ಧಿಕ್ಕಾರ ಎಂದು ತಿಳಿಸಿದ್ದಾರೆ.

Exit mobile version